ಬೆಂಗಳೂರು: ರಾಜಧಾನಿ ವಾಹನ ದಟ್ಟಣೆಯಲ್ಲಿ ನರಳುತ್ತಿರುವ ವೈಟ್ಫೀಲ್ಡ್ ಭಾಗದ ಐಟಿ ಉದ್ಯೋಗಿಗಳಿಗೆಗೊಂದು ಸಂತೋಷದ ಸುದ್ದಿ. ಮಾರ್ಚ್ ಎರಡನೇ ವಾರದಲ್ಲಿ ಕೆ.ಆರ್.ಪುರಂ – ವೈಟ್ಫೀಲ್ಡ್ ಮೆಟ್ರೋ ರೈಲು ಮಾರ್ಗ ಆರಂಭವಾಗಲಿದೆ.
ಈಗಾಗಲೇ ಈ ನೂತನ ಮಾರ್ಗದ ಕಾಮಗಾರಿ ಶೇ.99 ರಷ್ಟು ಪೂರ್ಣಗೊಂಡಿದೆ. ಮಾ.11 ರಂದು ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೆದ್ದಾರಿ ಉದ್ಘಾಟನೆಗೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡುವ ಸಾಧ್ಯತೆಗಳಿವೆ. ಈ ಮೂಲಕ ಕೆ.ಆರ್ ಪುರಂ ವೈಟ್ಫೀಲ್ಡ್ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ತಗ್ಗವು ಸಾಧ್ಯತೆಗಳಿವೆ.
ಸುರಕ್ಷತಾ ಆಯುಕ್ತರಿಂದ ಹಸಿರು ನಿಶಾನೆ
ಬಹುನಿರೀಕ್ಷಿತ ಕೆ.ಆರ್.ಪುರ– ವೈಟ್ಫೀಲ್ಡ್ ಮೆಟ್ರೋ ರೈಲು ಮಾರ್ಗಕ್ಕೆ ಮೆಟ್ರೊ ರೈಲು ಸುರಕ್ಷತಾ ಆಯುಕ್ತರಿಂದ (ಸಿಆರ್ಎಸ್) ಅನುಮತಿ ದೊರೆತಿದೆ. ಕಳೆದ ವಾರ ಸಿಆರ್ಎಸ್ ತಂಡ ಮಾರ್ಗದಲ್ಲಿ ಸಂಚಾರ ನಡೆಸಿ ಸುರಕ್ಷತೆ ಪರಿಶೀಲನೆ ನಡೆಸಿತ್ತು. ಬಳಿಕ ಮಾರ್ಗವು ಮೆಟ್ರೋ ಓಡಾಟಕ್ಕೆ ಸುರಕ್ಷಿತವಾಗಿದೆ ಫೆ.28ರಂದು ಪ್ರಮಾಣ ಪತ್ರ ನೀಡಿದೆ.
ಲೋಕಾರ್ಪಣೆಗೆ ಸಿದ್ಧತೆ
ವಾಣಿಜ್ಯ ಸಂಚಾರಕ್ಕೆ ಈ ಮಾರ್ಗ ಸುರಕ್ಷಿತವಾಗಿರುವ ಬಗ್ಗೆ ಹಸಿರು ನಿಶಾನೆ ದೊರೆತ ಬೆನ್ನಲ್ಲೇ ಬೆಂಗಳೂರು ಮೆಟ್ರೋ ರೈಲು ನಿಗಮ ( ಬಿಎಂಆರ್ಸಿಎಲ್) ಲೋಕಾರ್ಪಣೆಗೆ ಸಿದ್ಧತೆ ನಡೆಸುತ್ತಿದೆ.ಮುಂದಿನ ವಾರ ರಾಜ್ಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಮಾಡಿಸುವ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ.
ಮಾರ್ಚ್ 15ರೊಳಗೆ ಕಾಮಗಾರಿ ಶೇ.100ರಷ್ಟು ಪೂರ್ಣ
ಕೆ.ಆರ್.ಪುರಂ ವೈಟ್ಫೀಲ್ಡ್ ಮೆಟ್ರೋ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಮೆಟ್ರೋ ನಿಲ್ದಾಣದಲ್ಲಿ ಒಂದಿಷ್ಟು ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇವೆ. ಮಾರ್ಚ್ 15ರೊಳಗೆ ನಿಲ್ದಾಣಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಆದರೆ, ವಾಣಿಜ್ಯ ಸಂಚಾರವನ್ನು ಮಾರ್ಚ್ ಎರಡನೇ ವಾರ ಆರಂಭಿಸಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಐಟಿ ಬಿಟಿ ಉದ್ಯೋಗಿಗಳಿಗೆ ನೆರವು
ವೈಟ್ ಫೀಲ್ಡ್ನಲ್ಲಿ ನೂರಾರು ಐಟಿ ಬಿಟಿ ಕಂಪನಿಗಳಿದ್ದು, ನಿತ್ಯ ನಗರದ ಹಲವು ಭಾಗದಿಂದ ಲಕ್ಷಾಂತರ ಉದ್ಯೋಗಿಗಳು ಅಲ್ಲಿಗೆ ತೆರಳುತ್ತಾರೆ. ಸದ್ಯ ಟ್ರಾಫಿಕ್ ದಟ್ಟಣೆಯಲ್ಲಿಯೇ ಪರದಾಡುತ್ತಿದ್ದಾರೆ. ಈ ಮಾರ್ಗದಲ್ಲಿ ಮೆಟ್ರೋ ಆರಂಭವಾದರೆ ಆ ಎಲ್ಲಾ ಉದ್ಯೋಗಿಗಳಿಗೂ ಸಂಚಾರ ಸುಲಭವಾಗಲಿದೆ. ಜತೆಗೆ ಐ.ಟಿ ಕಾರಿಡಾರ್ಗೆ ನಗರದ ವಿವಿಧೆಡೆಯಿಂದ ಸಂಪರ್ಕ ಕಲ್ಪಿಸಿದಂತೆ ಆಗಲಿದೆ. ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆಯೂ ದುಪ್ಪಟ್ಟಾಗುವ ಸಾಧ್ಯತೆ ಇದೆ.
ಮಧ್ಯದಲ್ಲಿ ಫೀಡರ್ ಬಸ್ ಸೇವೆ
ಸದ್ಯ ಕೆ.ಆರ್.ಪುರ–ವೈಟ್ಫೀಲ್ಡ್ ನಡುವಿನ 13.71 ಕಿಲೋ ಮೀಟರ್ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ. ಬೈಯಪ್ಪನಹಳ್ಳಿ–ಕೆ.ಆರ್.ಪುರ ನಡುವಿನ ಮಾರ್ಗ ಜೂನ್ ಅಂತ್ಯ ಅಥವಾ ಜುಲೈನಲ್ಲಿ ಲೋಕಾರ್ಪಣೆಯಾಗಲಿದೆ. ಅಲ್ಲಿಯವರೆಗೂ ಆ ಎರಡು ನಿಲ್ದಾಣಗಳ ನಡುವೆ ಬಿಎಂಟಿಸಿ ಬಸ್ಗಳನ್ನು ಫೀಡರ್ ಸೇವೆ ಆರಂಭಿಸಲಾಗುತ್ತದೆ. ಬೈಯ್ಯಪ್ಪನಹಳ್ಳಿಯಿಂದ ಮೆಟ್ರೋ ಇಳಿದು ಬಿಎಂಟಿಸಿ ಬಸ್ ಹತ್ತಿ ಎರಡು ಕಿ.ಮೀ ಕೆ.ಆರ್.ಪುರ ನಿಲ್ದಾಣಕ್ಕೆ ತೆರಳಿ ಮತ್ತೆ ಮೆಟ್ರೋ ಹತ್ತಿ ವೈಟ್ಫೀಲ್ಡ್ ತೆರಳಬಹುದು ಎನ್ನುತ್ತಾರೆ ಬಿಎಂಆರ್ಸಿಎಲ್ ಅಧಿಕಾರಿಗಳು.