ಕಳಸ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಗೋಡು ಪ್ರದೇಶದ ನಿವಾಸಿಗಳು ಮೂಲಸೌಲಭ್ಯಗಳಿಂದ ವಂಚಿತರಾಗಿ ಬೇಸತ್ತು ಮುಂದಿನ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ 40ಕ್ಕೂ ಹೆಚ್ಚು ಮನೆಗಳು ಇರುವ ಕಲ್ಲುಗೋಡು ಪ್ರದೇಶದ ನಿವಾಸಿಗಳು ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ಗಳನ್ನು ಅಳವಡಿಸಿದ್ದಾರೆ.
ಮಳೆಗಾಲದಲ್ಲಿ ಕೆಸರುಮಯವಾಗುವ ಕಳಸ-ಕಲ್ಲುಗೋಡು ರಸ್ತೆ ಅಭಿವೃದ್ಧಿ ಮಾಡದೆ ಇರುವುದು, ಕಲ್ಲುಗೋಡು ತೂಗುಸೇತುವೆಯನ್ನು ಕಳೆದ 15 ವರ್ಷದಲ್ಲಿನಿರ್ವಹಣೆ ಮಾಡದೆ ಇರುವುದು ಮುಂತಾದ ವಿಚಾರಗಳು ಗ್ರಾಮಸ್ಥರನ್ನು ಆಕ್ರೋಶಭರಿತರನ್ನಾಗಿಸಿವೆ. ಕಲ್ಲುಗೋಡು ರಸ್ತೆಯ ದುಸ್ಥಿತಿಯಿಂದ ಆಟೊಗಳು ಕೂಡ ಗ್ರಾಮಕ್ಕೆ ಬರುತ್ತಿಲ್ಲ. ಅನಾರೋಗ್ಯದ ಸಂದರ್ಭದಲ್ಲಿ ಬಹಳ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ. ಗ್ರಾಮದಲ್ಲಿಕುಡಿಯುವ ನೀರಿನ ಪೂರೈಕೆ ಕೂಡ ಇಲ್ಲದೆ ಜನರು ಭದ್ರಾ ನದಿಗೆ ಹೋಗಿ ನೀರು ತರಬೇಕಾಗಿದೆ. ಇದರಿಂದ ಕೂಲಿ ಕೆಲಸಕ್ಕೆ ಹೋಗುವವರಿಗೆ ಮತ್ತು ಮಹಿಳೆಯರಿಗೆ ಭಾರಿ ಸಂಕಟ ಎದುರಾಗಿದೆ ಎಂದು ಹಳ್ಳಿಗರು ಹೇಳುತ್ತಾರೆ.
15 ವರ್ಷದ ಹಿಂದೆ ನಿರ್ಮಾಣ ಆದ ತೂಗು ಸೇತುವೆಗೆ ಈವರೆಗೂ ಬಣ್ಣ ಬಳಿದಿಲ್ಲ. ಇದರಿಂದ ಸೇತುವೆ ಶಿಥಿಲ ಆಗಿದ್ದು ಬೀಳುವ ಸ್ಥಿತಿಯಲ್ಲಿದೆ. ಕಳೆದ ಮಳೆಗಾಲದಲ್ಲಿಕಲ್ಲುಗೋಡು ಸಂಪರ್ಕಿಸುವ ಸೇತುವೆಯ ತಡೆಗೋಡೆ ಕುಸಿದು ಬಿದ್ದಿದೆ. ಆದರೆ ಈವರೆಗೂ ಅದನ್ನು ಪುನರ್ ನಿರ್ಮಾಣ ಮಾಡುವ ಕೆಲಸವನ್ನು ಲೋಕೋಪಯೋಗಿ ಇಲಾಖೆ ಮಾಡಿಲ್ಲ. ಜನಪ್ರತಿನಿಧಿಗಳಿಗೆ ನಮ್ಮ ಬೇಡಿಕೆ ಈಡೇರಿಸುವಂತೆ ಕಳೆದ 25 ವರ್ಷಗಳಿಂದ ಮನವಿ ಮಾಡಿದ್ದರೂ ಉಪಯೋಗ ಆಗಿಲ್ಲ. ಈ ನಿರ್ಲಕ್ಷ ್ಯ ಖಂಡಿಸಿ ಮತದಾನ ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.