ಹೈದರಾಬಾದ್: ಹಿಂದೆ ಮಹಿಳೆಯರು ತಮ್ಮ ಪಾವಿತ್ರ್ಯತೆಯನ್ನು ಸಾಬೀತುಪಡಿಸಲು ಅಗ್ನಿಪ್ರವೇಶ ಮಾಡುತ್ತಿದ್ದರು ಎಂಬುದನ್ನು ಪುರಾಣಗಳಲ್ಲಿ ಹಾಗೂ ಇತಿಹಾಸಗಳಲ್ಲಿ ಕೇಳಿದ್ದೇವೆ. ಆದರೆ ಈ ರೀತಿಯ ಆಚರಣೆ ತೆಲಂಗಾಣದಲ್ಲಿ (Telangana) ನಡೆದಿದೆ. ವ್ಯಕ್ತಿಯೊಬ್ಬ ತನ್ನ ಅಣ್ಣನ ಪತ್ನಿಯೊಂದಿಗೆ ಅಕ್ರಮ ಸಂಬಂಧ (Affair) ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸಲು ಅಗ್ನಿಪರೀಕ್ಷೆ (Agnipariksha) ಮಾಡಿಕೊಂಡಿದ್ದಾನೆ. ಈ ಮೂಲಕ ತಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸಿದ್ದಾನೆ.
ತೆಲಂಗಾಣದ ಬಂಜಾರಿಪಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರನ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದ ಎಂಬುದಾಗಿ ಆರೋಪಿಸಲಾಗಿತ್ತು. ವ್ಯಕ್ತಿಯ ಸಹೋದರ ಪ್ರಕರಣವನ್ನು ಪಂಚಾಯಿತಿಗೆ ಕೊಂಡೊಯ್ದು, ಅಲ್ಲಿ ಆತನ ಬಗ್ಗೆ ವಿಚಾರಣೆ ಮಾಡಲಾಗಿತ್ತು. ಈ ವೇಳೆ ಪಂಚಾಯಿತಿ ಮುಖಂಡರು ಆರೋಪಿ ವ್ಯಕ್ತಿ ಅಗ್ನಿ ಪ್ರವೇಶ ಮಾಡಬೇಕು ಎಂದು ಆದೇಶಿಸಿದ್ದರು. ಇದರ ಪ್ರಕಾರ ವ್ಯಕ್ತಿ ಕೆಂಡದ ಮಧ್ಯೆ ಇಡಲಾಗಿದ್ದ ಬಿಸಿ ಕಬ್ಬಿಣದ ಸಲಾಕೆಯನ್ನು ಕೈಯಿಂದ ಎತ್ತಬೇಕಿತ್ತು.
ಮುಖಂಡರ ಆದೇಶದಂತೆ ವ್ಯಕ್ತಿ ಕೆಂಡದಿಂದ ಕೆಂಪಾಗಿದ್ದ ಕಬ್ಬಿಣದ ಸಲಾಕೆಯನ್ನು ಕೈಯಿಂದ ಎತ್ತಿ ಆಚೆ ಎಸೆದಿದ್ದಾನೆ. ಈ ಮೂಲಕ ತಾನು ನಿರಪರಾಧಿ ಎಂಬುದಾಗಿ ಸಾಬೀತು ಪಡಿಸಿದ್ದಾನೆ. ಆದರೆ ಈ ಪರೀಕ್ಷೆಯಿಂದಲೂ ಸುಮ್ಮನಾಗದ ಮುಖಂಡರು, ಅತ್ತಿಗೆಯೊಂದಿಗೆ ಸಂಬಂಧ ಹೊಂದಿರುವುದನ್ನು ಒಪ್ಪಿಕೊಳ್ಳುವಂತೆ ಆತನಿಗೆ ಒತ್ತಾಯಿಸಿದ್ದಾರೆ. ಇದಾದ ಬಳಿಕ ಅಕ್ರಮ ಸಂಬಂಧದ ಆರೋಪ ಹೊತ್ತಿದ್ದ ಮಹಿಳೆ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ವ್ಯಕ್ತಿ ಅಗ್ನಿಪ್ರವೇಶ ಮಾಡಿ, ಬಿಸಿ ಕಬ್ಬಿಣದ ಸಲಾಕೆಯನ್ನು ಬರಿಗೈಯಲ್ಲಿ ಎತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.