ಅಹಮದಾಬಾದ್: ಡೆತ್ ಓವರ್ನಲ್ಲಿ ಅಶುತೋಷ್ ಶರ್ಮಾ ಹಾಗೂ ಶಶಾಂಕ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 19.5 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 200 ರನ್ ಪೂರೈಸಿ ಗೆಲುವು ಸಾಧಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಪಂಜಾಬ್, ಐಪಿಎಲ್ನಲ್ಲಿ ಹೆಚ್ಚುಬಾರಿ 200 ರನ್ ಗುರಿ ಬೆನ್ನಟ್ಟಿದ ಯಶಸ್ವಿ ತಂಡ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿತು.
ಕೊನೇ ಓವರ್ ರೋಚಕತೆ ಹೇಗಿತ್ತು?
ಕೊನೇ ಓವರ್ನಲ್ಲಿ ಪಂಜಾಬ್ ಗೆಲುವಿಗೆ 7 ರನ್ಗಳ ಅಗತ್ಯವಿತ್ತು. ದರ್ಶನ್ ನಾಲ್ಕಂಡೆ ಬೌಲಿಂಗ್ನಲ್ಲಿದ್ದರು. ನಾಲ್ಕಂಡೆ ಬೌಲಿಂಗ್ನ ಮೊದಲ ಎಸೆತದಲ್ಲೇ ಸಿಕ್ಸರ್ ಪ್ರಯತ್ನಿಸಿದ ಅಶುತೋಷ್ ಬೌಂಡರಿ ಲಾಂಗ್ಆನ್ನಲ್ಲಿ ಕ್ಯಾಚ್ ನೀಡಿ ಔಟಾದರು. 2ನೇ ಎಸೆತದಲ್ಲಿ ವೈಡ್ ಎಸೆದ ನಾಲ್ಕಂಡೆ 3ನೇ ಎಸೆತವನ್ನು ಬೀಟ್ ಮಾಡಿದ್ದರು. ಇದರಿಂದ ಪಂದ್ಯ ರೋಚಕತೆಗೆ ತಿರುಗಿತ್ತು. ಆದ್ರೆ ಕ್ರೀಸ್ನಲ್ಲಿದ್ದ ಹರ್ಪ್ರೀತ್ ಬ್ರಾರ್ 4ನೇ ಎಸೆತದಲ್ಲಿ 1 ರನ್ ತಂದುಕೊಡುತ್ತಿದ್ದಂತೆ ಬೌಂಡರಿ ಚಚ್ಚಿದ ಶಶಾಂಕ್ ಸಿಂಗ್ ಗೆಲುವನ್ನು ಪಂಜಾಬ್ ತಂಡದತ್ತ ವಾಲಿಸಿದರು. 5ನೇ ಎಸೆತ ಎದುರಿಸುವಲ್ಲಿ ಶಶಾಂಕ್ ವಿಫಲವಾದರೂ ಲೆಗ್ಬೈಸ್ ರನ್ ಕದಿಯುವಲ್ಲಿ ಯಶಸ್ವಿಯಾದರು. ಪರಿಣಾಮ ಪಂಜಾಬ್ ಕಿಂಗ್ಸ್ 3 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು