ನವದೆಹಲಿ: ಪಾಶ್ಚಾತ್ಯ ರಾಯಭಾರಿಗಳ ನಿಯೋಗಗಳ ಅಸಮರ್ಪಕವಲ್ಲದ ನಡವಳಿಕೆಗಳಿಗಾಗಿ ಭಾರತದ ಕ್ಷಮೆ ಯಾಚಿಸುತ್ತೇನೆ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದಾರೆ.
ಜಿ20 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ಬಳಿಕ ಮಾತನಾಡಿದ ಅವರು, ಪಶ್ಚಿಮಾತ್ಯ ದೇಶಗಳ ನಿಯೋಗಗಳು ಜಿ20 ಕಾರ್ಯಸೂಚಿಯನ್ನು ಒಂದು ಪ್ರಹಸನವನ್ನಾಗಿ ಪರಿವರ್ತಿಸಿ ಅಸಭ್ಯ ನಡವಳಿಕೆ ಪ್ರದರ್ಶಿಸಿದರು. ಇದಕ್ಕಾಗಿ ಭಾರತದ ಮತ್ತು ದಕ್ಷಿಣದ ದೇಶಗಳ ಪ್ರತಿನಿಧಿಗಳ ಕ್ಷಮೆ ಯಾಚಿಸುತ್ತೇನೆ ಎಂದು ತಿಳಿಸಿದರು.
ಜಿ20 ಸಭೆಯಲ್ಲಿ ವಿವಿಧ ವಿದೇಶಾಂಗ ಸಚಿವರು ಪ್ರಮುಖ ಜಾಗತಿಕ ವಿಚಾರಗಳ ಬಗ್ಗೆ ಚರ್ಚಿಸಿದರು. ಅಮೆರಿಕ, ಪಾಶ್ಚಾತ್ಯ ದೇಶಗಳು ಮತ್ತು ಚೀನಾದ ನಡುವೆ ಹೆಚ್ಚುತ್ತಿರುವ ಬಿರುಕು, ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ರಷ್ಯಾ-ಚೀನಾ ಮೈತ್ರಿ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ವಿದೇಶಾಂಹಗ ಸಚಿವ ಎಸ್. ಜೈಶಂಕರ್, ಅಮೆರಿಕದ ಆಂಟನಿ ಬ್ಲಿಂಕನ್, ಸೆರ್ಗೆ ಲಾವ್ರೊವ್, ಚೀನಾದ ಕ್ವಿನ್ ಗಾಂಗ್, ಬ್ರಿಟನ್ನ ಜೇಮ್ಸ್ ಕ್ಲೆವೆರ್ಲಿ ಹಾಗೂ ಯುರೋಪಿಯನ್ ಒಕ್ಕೂಟದ ವಿದೇಶಾಂಗ ಸಚಿವರ ಪ್ರತಿನಿಧಿ ಜೋಸೆಪ್ ಬೊರೆಲ್ ಫಾಂಟೆಲ್ಲೆಸ್ ಸಭೆಯಲ್ಲಿ ಭಾಗಿಯಾದರು.
ಜಿ20 ಸಭೆಯ ಪೂರ್ವಭಾವಿಯಾಗಿ ವಿವಿಧ ದೇಶಗಳ ವಿದೇಶಾಂಗ ಸಚಿವರ ಜತೆ ಜೈಶಂಕರ್ ಸಭೆ ನಡೆಸಿದ್ದರು. ಬುಧವಾರ ರಷ್ಯಾ ವಿದೇಶಾಂಗ ಸಚಿವರ ಜತೆಗೂ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಬ್ರಿಟನ್ನ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವೆರ್ಲಿ ಜತೆಗೂ ದ್ವಿಪಕ್ಷೀಯ ಮಾತುಕತೆ ನಡೆಸಲಾಯಿತು.