ಲಂಡನ್: ಯುಕೆ ದೇಶದಲ್ಲಿ ಹವಾಮಾನ ವೈಪರೀತ್ಯದಿಂದ ಕೃಷಿಗಾರಿಕೆ ಹಿನ್ನಡೆ ಉಂಟಾಗಿದೆ. ಅದರ ಪರಿಣಾಮವಾಗಿ ಹಣ್ಣು ಸೊಪ್ಪು ತರಕಾರಿಗಳ ಕೊರತೆಯನ್ನು ಅಲ್ಲಿನ ಜನತೆ ಎದುರಿಸುವಂತಾಗಿದೆ.
ಕಳೆದ 2-3 ವಾರಗಳಿಂದ ಬ್ರಿಟನ್ ಸಲಾಡ್ ಕೊರತೆ ಅನುಭವಿಸುತ್ತಿದೆ. ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ಗಳಲ್ಲಿ ಟೊಮೆಟೋ, ಸೌತೆಕಾಯಿ ಇತ್ಯಾದಿ ಸಲಾಡ್ ತರಕಾರಿಗಳು ಸಿಗುವುದು ದುರ್ಲಭವಾಗಿದೆ. ಇಂಗ್ಲೆಂಡ್ ದೇಶದ ಆಹಾರಪದ್ಧತಿಯಲ್ಲಿ ಸಲಾಡ್ ಪ್ರಮುಖವಾದುದು. ಆದರೆ ದುಬಾರಿ ಬೆಲೆ ಕೊಡಲು ಸಿದ್ದವಿದ್ದರು ಸೊಪ್ಪು ತರಕಾರಿಗಳು ಸಿಗದಂತಾಗಿದೆ.
ಕೋಸು, ಹುರಳಿಕಾಯಿ, ಬೀಟ್ರೂಟ್, ಸೌತೆಕಾಯಿ, ಟೊಮೆಟೋ, ಮೂಲಂಗಿ ಇತ್ಯಾದಿ ತರಕಾರಿಗಳು, ಹಾಗು ಬಸಳೆಸೊಪ್ಪು ಇತ್ಯಾದಿ ಸೊಪ್ಪುಗಳನ್ನು ಸಲಾಡ್ ಮಾಡಿ ತಿನ್ನುವ ಕ್ರಮ ಹೆಚ್ಚು ಚಾಲ್ತಿಯಲ್ಲಿದೆ. ಈಗ ಈ ಸೊಪ್ಪು ತರಕಾರಿಗಳ ಸರಬರಾಜು ತೀರಾ ಕಡಿಮೆ ಆಗಿರುವುದು ಅಲ್ಲಿನ ಜನಜೀವನಕ್ಕೆ ತೀರಾ ತೊಂದರೆ ಉಂಟಾಗಿದೆ.
ಟೆಸ್ಕೋ, ಆಸ್ಡಾ, ಮಾರಿಸನ್ಸ್, ಲಿಡಲ್ ಜಿಬಿ, ಆಲ್ಡಿ ಇತ್ಯಾದಿ ಕಂಪನಿಗಳ ಸೂಪರ್ಮಾರ್ಕೆಟ್ಗಳಲ್ಲಿ ಸಲಾಡ್ ಸೊಪ್ಪು ತರಕಾರಿಗಳ ಮಾರಾಟವನ್ನು ಸೀಮಿತಗೊಳಿಸಲಾಗಿದೆ. ಒಬ್ಬ ಗ್ರಾಹಕರಿಗೆ ಇಂತಿಷ್ಟು ಪ್ರಮಾಣಕ್ಕಿಂತ ಹೆಚ್ಚು ತರಕಾರಿಗಳನ್ನು ನೀಡುತ್ತಿಲ್ಲ.
ಬ್ರಿಟನ್ ದೇಶಕ್ಕೆ ಈ ಸೊಪ್ಪು ಮತ್ತು ತರಕಾರಿಗಳು ಹೆಚ್ಚಾಗಿ ಬರುವುದು ದಕ್ಷಿಣ ಯೂರೋಪ್ ಮತ್ತು ಉತ್ತರ ಆಫ್ರಿಕಾದ ಭಾಗಗಳಿಂದ. ಆದರೆ, ಅಲ್ಲಿ ಹವಾಮಾನ ವೈಪರೀತ್ಯದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬಂದಿಲ್ಲ. ಹೀಗಾಗಿ, ಬ್ರಿಟನ್ಗೆ ಈ ಸೊಪ್ಪು ತರಕಾರಿಗಳ ಸರಬರಾಜು ಕಡಿಮೆಯಾಗಿದೆ.