ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತನ್ನನ್ನು ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರೋಧಿ ಮುಖಂಡ ನೆಲ್ಸನ್ ಮಂಡೇಲಾಗೆ ಹೋಲಿಸಿಕೊಂಡಿದ್ದಾರೆ.
77 ವರ್ಷದ ಟ್ರಂಪ್ ವಿರುದ್ಧ 4 ವಿಭಿನ್ನ ಕ್ರಿಮಿನಲ್ ಪ್ರಕರಣಗಳಲ್ಲಿ ದೋಷಾರೋಪಣೆ ಮಾಡಲಾಗಿದ್ದು ಈ ಪ್ರಕರಣಗಳಲ್ಲಿ ಟ್ರಂಪ್ಗೆ ಜೈಲುಶಿಕ್ಷೆಯಾಗುವ ಸಾಧ್ಯತೆಯಿದೆ.
ಇದರಲ್ಲಿ ಅಶ್ಲೀಲ ಚಿತ್ರಗಳ ನಟಿಯ ಜತೆಗಿನ ಸಂಬಂಧವನ್ನು ಗುಟ್ಟಾಗಿ ಇಡಲು ಆಕೆಗೆ ಹಣ ಪಾವತಿಸಿದ ಪ್ರಕರಣವೂ ಸೇರಿದ್ದು ಇದರ ವಿಚಾರಣೆ ಎಪ್ರಿಲ್ 15ರಿಂದ ಆರಂಭವಾಗಲಿದೆ. ಈ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಪ್ರಕರಣದ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡದಂತೆ ಟ್ರಂಪ್ಗೆ ನ್ಯಾಯಾಧೀಶ ಜುವಾನ್ ಮರ್ಚನ್ ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್, ನ್ಯಾಯಾಧೀಶ ಮರ್ಚನ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ಸ್ವಾತಂತ್ರ್ಯ ಮತ್ತು ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. `ಈ ಪಕ್ಷಪಾತದ ಅಧಿಕಾರಿ ಮುಕ್ತ ಮತ್ತು ಸ್ಪಷ್ಟವಾದ ಸತ್ಯವನ್ನು ಮಾತನಾಡಿದ್ದಕ್ಕೆ ನನ್ನನ್ನು ಜೈಲಿನಲ್ಲಿ ಇರಿಸಲು ಬಯಸಿದರೆ ನಾನು ಸಂತೋಷದಿಂದ ಆಧುನಿಕ ಯುಗದ ನೆಲ್ಸನ್ ಮಂಡೇಲಾ ಆಗುತ್ತೇನೆ. ಅದು ನನ್ನ ದೊಡ್ಡ ಗೌರವವಾಗಲಿದೆ’ ಎಂದು ತನ್ನ ಸಾಮಾಜಿಕ ಮಾಧ್ಯಮ ಟ್ರುಥ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆಯೂ ಟ್ರಂಪ್ ತನ್ನನ್ನು ಮಂಡೇಲಾ ಹಾಗೂ ಯೇಸು ಕ್ರಿಸ್ತರ ಜತೆ ಹೋಲಿಕೆ ಮಾಡಿಕೊಂಡಿದ್ದರು. ಟ್ರಂಪ್ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತವರ ಚುನಾವಣಾ ಪ್ರಚಾರ ತಂಡ ಟೀಕಿಸಿದೆ.