ಬೆಂಗಳೂರು:- ರಸ್ತೆ ಅಗಲೀಕರಣಕ್ಕೆ ದೇಗುಲ ತೆರವು ಮಾಡಲ್ಲ ಎಂದು ರಾಜರಾಜೇಶ್ವರಿನಗರದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಹಾಗೆಯೇ ಗಣೇಶನ ಶಾಪಕ್ಕೆ ಗುರಿಯಾಗಲ್ಲ ಎಂದು ಹೇಳಿದ್ದಾರೆ.
ರಾಜರಾಜೇಶ್ವರಿನಗರದ ರಸ್ತೆ ಅಗಲೀಕರಣಕ್ಕಾಗಿ ದೇಗುಲ ಸ್ಥಳಾಂತರ ವಿಚಾರ ಪ್ರಸ್ತಾಪವಾದಾಗ ಅವರು, ದೇವಾಲಯವನ್ನು ಕೆಡವುದು ರಸ್ತೆ ಅಗಲೀಕರಣ ಯೋಜನೆಯ ಭಾಗವಾಗುವುದಿಲ್ಲ ಎಂದಿದ್ದಾರೆ.
ರಸ್ತೆ ಅಗಲೀಕರಣದ ಬದಲು ಸುರಂಗ ರಸ್ತೆ ನಿರ್ಮಿಸುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ನಿವಾಸಿಗಳಿಗೆ ಉಪಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ಇದು ತುಂಬಾ ಜನನಿಬಿಡ ಜಂಕ್ಷನ್ ಮತ್ತು ರಿಂಗ್ ರೋಡ್ ಅನ್ನು ಸಂಪರ್ಕಿಸುತ್ತದೆ ಎಂಬುದು ನನಗೆ ತಿಳಿದಿದೆ. ನಾನು ಪರ್ಯಾಯ ಮಾರ್ಗಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕಕ್ಕೆ ಬರ ಪರಿಹಾರ ನೀಡುವ ವಿಷಯದಲ್ಲಿ ಅನ್ಯಾಯ ಎಸಗಿರುವುದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊನೆಗೂ ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು ಎಂದು ಡಿಕೆ ಶಿವಕುಮಾರ್ ಇದೇ ವೇಳೆ ವ್ಯಂಗ್ಯವಾಡಿದರು.
ಬರ ಪರಿಹಾರಕ್ಕೂ ಚುನಾವಣಾ ನೀತಿ ಸಂಹಿತೆಗೂ ಸಂಬಂಧವಿಲ್ಲ. ನೀತಿ ಸಂಹಿತೆ ಜಾರಿಯಾಗುವ ಸುಮಾರು ನಾಲ್ಕು ತಿಂಗಳಿಗೂ ಮೊದಲೇ ನಾವು ಮನವಿ ಮಾಡಿದ್ದೆವು. ಇಷ್ಟು ದಿನ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡಿ ಇದೀಗ ವಾಸ್ತವ ವಿಚಾರವನ್ನು ನಿರ್ಮಲಾ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.