ಯುಗಾದಿ ಹಬ್ಬ ಹೊಸ ವರ್ಷದ ಆಗಮನ. ಬೇವು-ಬೆಲ್ಲ ತಿಂದು ಸಿಹಿ ಒಬ್ಬಟ್ಟಿನ ಜೊತೆಗೆ ಊಟ ಸವಿಯುವದರೊಂದಿಗೆ ಯುಗಾದಿಯ ವಿಶೇಷ ಆಚರಣೆಯನ್ನು ಮಾಡುತ್ತೇವೆ. ಸಾಮಾನ್ಯವಾಗಿ ವಿವಿಧ ಬಗೆಯ ಸಸ್ಯಹಾರಿ ಊಟದ ಜೊತೆ, ಸಿಹಿ ಒಬ್ಬಟ್ಟು, ಕಾಯಿ ಹೋಳಿಗೆಯನ್ನು ಸಿದ್ಧಪಡಿಸಿ ಊಟದಲ್ಲಿ ಸವಿಯುತ್ತಾರೆ. ಹಬ್ಬ ಎಂದಾಕ್ಷಣ ಊಟದಲ್ಲಿ ವಿವಿಧ ಖಾದ್ಯಗಳು ಇರಲೇಬೇಕು. ಜೊತೆಗೆ ಸಿಹಿ ಹಬ್ಬದ ಆಚರಣೆಯನ್ನು ಹೆಚ್ಚಿಸುತ್ತದೆ.
ಪ್ರಾಚೀನ ಹಿನ್ನೆಲೆ
ಯುಗಾದಿ ನಿನ್ನೆ, ಮೊನ್ನೆಯಿಂದ ಆಚರಿಸಿಕೊಂಡು ಬಂದ ಹಬ್ಬವಲ್ಲ. ಬದಲಾಗಿ ಶತ ಶತಮಾನಗಳಿಂದಲೂ ಆಚರಿಸಿಕೊಂಡು ಬಂದ ಹಬ್ಬವಾಗಿದೆ. ಅದರ ಮೂಲವು ಶಾತವಾಹನ ರಾಜವಂಶಕ್ಕೂ ಹಿಂದಿನದು ಎನ್ನುವ ನಂಬಿಕೆಯಿದೆ. ಈ ರಾಜ ವಂಶವು ಇಂದಿನ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ಭಾಗಗಳನ್ನು ಕ್ರಿ.ಪೂ ಸುಮಾರು 230 ರಿಂದ ಕ್ರಿ.ಶ 220 ರವರೆಗೆ ಆಳಿದ ಸಾಮ್ರಾಜ್ಯವಾಗಿದೆ. ಈ ಕಾಲದ ಪ್ರಾಚೀನ ಗ್ರಂಥಗಳು ಮತ್ತು ಶಾಸನಗಳಲ್ಲಿ ಹಬ್ಬದ ಉಲ್ಲೇಖವನ್ನು ಕಾಣಬಹುದು.
ಸಾಂಸ್ಕೃತಿಕ ಮಹತ್ವ
ಯುಗಾದಿಯು ಕೇವಲ ಹಬ್ಬದ ದಿನವಲ್ಲ. ಬದಲಾಗಿ, ಇದೊಂದು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ದಿನವಾಗಿದೆ. ಈ ಹಬ್ಬವನ್ನು ಆಚರಿಸುವ ಮುನ್ನವೇ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು, ಹೊಸ ಬಟ್ಟೆಗಳನ್ನು ಧರಿಸಲು ಮತ್ತು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಅಲಂಕರಿಸಲು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹೊಸ ವರ್ಷವನ್ನು ಹೊಸ ದೃಷ್ಟಿಕೋನ ಮತ್ತು ನವೀಕೃತ ಉತ್ಸಾಹದಿಂದ ಪ್ರಾರಂಭಿಸುವ ಆಲೋಚನೆಯನ್ನು ಹೊಂದಿರುತ್ತಾರೆ.
ಹೊಸ ಆರಂಭದ ಸಂಕೇತ
ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿಯನ್ನು ಹೊಸ ವರ್ಷದ ದಿನವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಹೊಸ ಯುಗದ ಆರಂಭವನ್ನು ಸಂಕೇತಿಸುತ್ತದೆ, ಏಕೆಂದರೆ ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನು ಈ ಮಂಗಳಕರ ದಿನದಂದು ಸೃಷ್ಟಿ ಪ್ರಕ್ರಿಯೆಯನ್ನು ಪ್ರಾರಂಭಿಸಿದನು ಎಂಬುದು ಈ ಹಬ್ಬಕ್ಕೆ ಸಂಬಂಧಿಸಿದ ಪೌರಾಣಿಕ ನಂಬಿಕೆಯಾಗಿದೆ.