ಬೆಂಗಳೂರು: ಲೋಕಾಯುಕ್ತ ದಾಳಿ ವೇಳೆ ಬಿಜೆಪಿ ಶಾಸಕರ ಪುತ್ರ ಸಿಕ್ಕಿಬಿದ್ದಿರುವ ಘಟನೆಗೆ ಸಂಬಂಧಿಸಿದಂತೆ ಶಾಸಕ ಪ್ರಿಯಾಂಕ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,ಏಳೂವರೆ ಕೋಟಿ ರೂಪಾಯಿ ಇವರಿಗೆ ಎಲ್ಲಿಂದ ಬಂತು. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಳಿ ಇಷ್ಟೊಂದು ಹಣವಿದ್ರೆ, ಇನ್ನು ಸಚಿವರು, ದೊಡ್ಡ ಸ್ಥಾನದಲ್ಲಿರುವವರ ಬಳಿ ಎಷ್ಟು ಹಣವಿರಬಹುದು. ನಾವು ‘ಪೇಸಿಎಂ’ ಅಭಿಯಾನ ಮಾಡಿದ್ದು ತಪ್ಪಾ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಇದಕ್ಕಿಂತ ಇನ್ಯಾವ ದಾಖಲೆ ಬೇಕು? ನಿನ್ನೆ ಬಹಳ ದೊಡ್ಡ ಮಟ್ಟದಲ್ಲಿ ಬಿಜೆಪಿ ಶಾಸಕನ ಪುತ್ರನ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ನಾವು ಯಾವಾಗಲೂ ಹೇಳ್ತಿದ್ವಿ, ವಿಧಾನಸೌಧವನ್ನ ವ್ಯಾಪಾರ ಸೌಧ ಮಾಡಿದ್ದಾರೆ ಅಂತ. ಅದಕ್ಕೆ ದಾಖಲೆ ಏನಿದೆ ಅಂತ ಕೇಳ್ತಿದ್ರು. ಸಾರ್ವಜನಿಕರ ವಲಯದಲ್ಲಿ ಇದು ಭ್ರಷ್ಟ ಸರ್ಕಾರ ಎನ್ನುವ ಅಭಿಪ್ರಾಯ ಇದೆ. ಮೋಸ್ಟ್ ಕರಪ್ಟ್ ಗವರ್ನಮೆಂಟ್ ಅಂತ ಜನ ಮಾತಾಡಿಕೊಳ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಅಮಿತ್ ಶಾ ಅವರು ನೀವು ಮೋದಿ ನೋಡಿ ಮತ ಹಾಕಿ. ಭ್ರಷ್ಟಾಚಾರ ಮುಕ್ತ ಆಡಳಿತ ಕೊಡ್ತೇವೆ ಅಂತ ಹೇಳಿದ್ದರು. ತಮ್ಮ ಸರ್ಕಾರದ ಹಣೆಬರಹ ಏನು ಅನ್ನೋದು ಅವರಿಗೆ ಗೊತ್ತಿದೆ ಅನ್ಸುತ್ತೆ. ಈಗ ಆಗಿರುವ ಬೆಳವಣಿಗೆ ನೋಡಿದರೇ ಅಮಿತ್ ಶಾ ಯಾಕೆ ಹೇಳಿದ್ರು ಅಂತ ಅರ್ಥ ಆಗುತ್ತಿದೆ. ನಾವು ದಾಖಲೆ ಸಹಿತ ಅಕ್ರಮ ಬಯಲಮಾಡಿದಾಗ ದಾಖಲೆ ಏನು ಅಂತ ಕೇಳ್ತಿದ್ರು, ಇದಕ್ಕಿಂತ ಮತ್ತೆ ಯಾವ ದಾಖಲೆ ಬೇಕು ಸ್ವಾಮಿ ಎಂದು ಟಾಂಗ್ ಕೊಟ್ಟರು.