ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ರಾಮಲಲ್ಲಾ ಈಗ ತನ್ನ ದಿವ್ಯ ಮತ್ತು ಭವ್ಯ ರೂಪದಲ್ಲಿ ಎಲ್ಲರ ಮುಂದೆ ಕಾಣುತ್ತಿದ್ದು, ಸರ್ವರಿಗೂ ದರ್ಶನ ನೀಡುತ್ತಿದ್ದಾರೆ. ಪುರಾಣಗಳಲ್ಲಿ ವಿವರಿಸಲಾದ ಅವರ ನೋಟವನ್ನು ಆಧರಿಸಿ ಭಗವಾನ್ ರಾಮಲಲ್ಲಾ ಅವರ ಮಗುವಿನ ರೂಪವನ್ನು ಅನೇಕ ದೈವಿಕ ಆಭರಣಗಳು ಮತ್ತು ವಸ್ತಗಳಿಂದ ಅಲಂಕರಿಸಲಾಗಿದೆ. ಅಧ್ಯಾತ್ಮ ರಾಮಾಯಣ,
ಶ್ರೀಮದ್ವಾಲ್ಮೀಕಿ ರಾಮಾಯಣ, ರಾಮಚರಿತಮಾನಸ್ ಮತ್ತು ಆಳವಂದರ ಸ್ತೋತ್ರಗಳ ಸಂಶೋಧನೆ ಮತ್ತು ಅಧ್ಯಯನದ ನಂತರ ಮತ್ತು ಅವುಗಳಲ್ಲಿ ವಿವರಿಸಲಾದ ಶ್ರೀರಾಮನ ಗ್ರಂಥಾಧಾರಿತ ಸೌಂದರ್ಯದ ಪ್ರಕಾರ ಈ ದೈವಿಕ ಆಭರಣಗಳನ್ನು ಮಾಡಲಾಗಿದೆ. ಅಯೋಧ್ಯೆಯ ನಿವಾಸಿ, ಖ್ಯಾತ ಬರಹಗಾರ ಯತೀಂದ್ರ ಮಿಶ್ರಾ ಅವರು ಆಭರಣಗಳ ಪರಿಕಲ್ಪನೆ ಮತ್ತು ನಿರ್ದೇಶ ಮಾಡಿದ್ದಾರೆ. ಇದರ ಆಧಾರದ ಮೇಲೆ ಅಂಕುರ್ ಆನಂದ್ ಅವರ ಸಂಸ್ಥೆ ಲಕ್ನೋದ ಹರ್ಷಹೈಮಲ್ ಶ್ಯಾಮಲಾಲ್ ಜ್ಯುವೆಲರ್ಸ್ ಈ ಆಭರಣವನ್ನು ತಯಾರಿಸಿದ್ದಾರೆ.
ಬಾಲ ರಾಮನ ಚಿನ್ನಾಭರಣಗಳನ್ನು ಉತ್ತರ ಪ್ರದೇಶದ ಲಕ್ನೋದ ಇಂಟರ್ನ್ಯಾಷನಲ್ ಜೆಮೊಲಾಜಿಕಲ್ ಇನ್ಸ್ಟಿಟ್ಯೂಟ್ (IGI) ಪ್ರಮಾಣೀಕರಿಸಿದ ಹರ್ಷ್ ಹಿಮಾಲ್ ಶ್ಯಾಮಲಾಲ್ ಜ್ಯುವೆಲರ್ಸ್ ವಿನ್ಯಾಸಗೊಳಿಸಿದೆ. ಸಿಇಒ ಅಂಕುರ್ ಆನಂದ್ ಅವರು ಹೇಳುವಂತೆ ಶ್ರೀರಾಮನ ಆಭರಣಗಳನ್ನು ತಯಾರಿಸುವಾಗ ಅದರ ವಿನ್ಯಾಸಕ್ಕೆ ಸಂಬಂಧಿಸಿದಂತೆ ಹಿಂದೂ ಧರ್ಮಗ್ರಂಥಗಳನ್ನು ಅಧ್ಯಯನ ನಡೆಸಿ ಜೊತೆಗೆ ಟಿವಿ ಶೋ ‘ರಾಮಾಯಣ’ದಿಂದ ಸಾಕಷ್ಟು ಸ್ಫೂರ್ತಿ ಪಡೆದು ಆಭರಣಕ್ಕೆ ಇಷ್ಟು ಸುಂದರವಾಗಿ ರೂಪು ನೀಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಬಾಲರಾಮನ ಒಟ್ಟು ಆಭರಣಕ್ಕೆ ಸಂಬಂಧಿಸಿದಂತೆ ಅಂದರೆ ಹಣೆಗೆ ಚಿನ್ನದ ತಿಲಕ, ಪಚ್ಚೆಯ ಉಂಗುರ, ಹಾರ, ಕಿರೀಟ, ಬಳೆ ಸೇರಿದಂತೆ ಎಲ್ಲಾ ಆಭರಣಗಳು 18,567 ವಜ್ರಗಳು, 2,984 ಮಾಣಿಕ್ಯಗಳು, 615 ಪಚ್ಚೆಗಳು ಮತ್ತು 439 ಪಾಲಿಶ್ ಮಾಡದ ವಜ್ರಗಳನ್ನು ಒಳಗೊಂಡಿವೆ.
ಬಾಲರಾಮನ ಕಿರೀಟ:
ಕಿರೀಟವು ರಾಮನ ಅತ್ಯಂತ ಸುಂದರವಾದ ಅಲಂಕಾರಗಳಲ್ಲಿ ಒಂದಾಗಿದ್ದು, ಮಧ್ಯದಲ್ಲಿ ಶ್ರೀರಾಮ ಲಲ್ಲಾ ವಂಶವನ್ನು ಪ್ರತಿನಿಧಿಸುವ ಸೂರ್ಯವಂಶದ ಲೋಗೋ ಕಾಣಬಹುದು. ರಾಜಮನೆತನದ ಪ್ರತೀಕವಾದ ನಮ್ಮ ರಾಷ್ಟ್ರೀಯ ಪಕ್ಷಿ ನವಿಲು ಕೂಡ ಇದೆ. ಹಸಿರು ಜ್ಞಾನವನ್ನು ಸಂಕೇತಿಸುತ್ತದೆ. ಕಿರೀಟವು ವಿವಿಧ ಗಾತ್ರದ ವಜ್ರಗಳು, ಮಾಣಿಕ್ಯಗಳು, ಮುತ್ತುಗಳು ಮತ್ತು ನೀಲಮಣಿಗಳ ಜೊತೆಗೆ 4 ಕಿಲೋಗ್ರಾಂಗಳಷ್ಟು ಚಿನ್ನವನ್ನು ಒಳಗೊಂಡಿದೆ. ಮಾಣಿಕ್ಯಗಳು ಸೂರ್ಯ (ಸೂರ್ಯ ದೇವರು) ಕಲ್ಲುಗಳು. ವಜ್ರಗಳು ಶುದ್ಧತೆ ಮತ್ತು ಪ್ರಾಮಾಣಿಕತೆಯನ್ನು ಪ್ರತಿನಿಧಿಸುತ್ತವೆ” ಎಂದು ಆನಂದ್ ವಿವರಿಸಿದ್ದಾರೆ.
ಬಾಲರಾಮನ ತಿಲಕ:
ಹಣೆಯ ತಿಲಕವನ್ನು ಆಧ್ಯಾತ್ಮಿಕತೆ ಮತ್ತು ಭಕ್ತರಿಗೆ ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಸುಮಾರು 16 ಗ್ರಾಂ ಚಿನ್ನದಿಂದ ಮಾಡಲಾಗಿದೆ. 3 ಕ್ಯಾರೆಟ್ ನೈಸರ್ಗಿಕ ವಜ್ರವು ಚಿಕ್ಕ ವಜ್ರಗಳು ಮತ್ತು ಸುಮಾರು 10 ಕ್ಯಾರೆಟ್ಗಳ ಬರ್ಮೀಸ್ ಮಾಣಿಕ್ಯಗಳಿಂದ ಆವೃತವಾಗಿದೆ. ಬೆಳಿಗ್ಗೆ ಸೂರ್ಯನ ಮೊದಲ ಕಿರಣವು ಈ ತಿಲಕದ ಮೇಲೆ ಬಿದ್ದಾಗ ಹೊಳೆಯುವ ರೀತಿಯಲ್ಲಿ ರತ್ನಗಳನ್ನು ಬಳಸಲಾಗಿದೆ ಎಂದು ಆನಂದ್ ಹೇಳಿದ್ದಾರೆ.
ಬಾಲರಾಮನ ಸೊಂಟದ ಡಾಬು:
ಬಾಲ ರಾಮನ ಡಾಬು ಸುಮಾರು 750 ಗ್ರಾಂ ತೂಕದ ಚಿನ್ನದಿಂದ ಮಾಡಲ್ಪಟ್ಟಿದ್ದು,ಕಂಕಣವು 70-ಕ್ಯಾರೆಟ್ ವಜ್ರಗಳು, 850 ಕ್ಯಾರೆಟ್ ಮಾಣಿಕ್ಯಗಳು ಮತ್ತು ಪಚ್ಚೆಗಳಿಂದ ಕೂಡಿದೆ.
ಬಾಲರಾಮನ ಕೈ ಕಡಗ:
ಬಾಲರಾಮನ ಕೈ ಕಡಗ 850 ಗ್ರಾಂ ಚಿನ್ನದಿಂದ ತಯಾರಿಸಲಾಗಿದೆ. ಈ ಕಡಗಗಳಲ್ಲಿ 100 ಕ್ಯಾರೆಟ್ ವಜ್ರಗಳು, 320 ಕ್ಯಾರೆಟ್ ಮಾಣಿಕ್ಯ ಮತ್ತು ಪಚ್ಚೆಗಳನ್ನು ಹೊಂದಿದೆ.
ಬಾಲರಾಮನ ಉಂಗುರ:
ಬಾಲ ರಾಮ ತನ್ನ ಬಲಗೈಯಲ್ಲಿ ಧರಿಸಿರುವ ಉಂಗುರವು 65 ಗ್ರಾಂ ತೂಕವಿದ್ದು, ಇದು 4 ಕ್ಯಾರೆಟ್ ವಜ್ರ ಮತ್ತು 33 ಕ್ಯಾರೆಟ್ ಪಚ್ಚೆಗಳನ್ನು ಹೊಂದಿದೆ. ಜೊತೆಗೆ ಎಡಗೈ ಉಂಗುರ 26 ಗ್ರಾಂ ಇದ್ದು, ವಜ್ರ ಹಾಗೂ ಮಾಣಿಕ್ಯಗಳನ್ನು ಒಳಗೊಂಡಿದೆ.
ಬಾಲರಾಮನ ನೆಕ್ಲೇಸ್:
500 ಗ್ರಾಂ ತೂಕದ ಚಿನ್ನದ ರೌಂಡ್ ನೆಕ್ಲೇಸ್, 50 ಕ್ಯಾರೆಟ್ ವಜ್ರಗಳು, 150 ಕ್ಯಾರೆಟ್ ಮಾಣಿಕ್ಯಗಳು, 380 ಕ್ಯಾರೆಟ್ ಪಚ್ಚೆಗಳನ್ನು ಒಳಗೊಂಡಿದೆ.