ಬೆಂಗಳೂರು: ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಸೃಷ್ಟಿಯ ಮೊದಲ ದಿನ, ಹೊಸ ಚಿಗುರಿನೊಂದಿಗೆ ಹೊಸ ವರುಷವನ್ನು ಜನರು ಬಹಳ ಸಂತಸದಿಂದ ಬರ ಮಾಡಿಕೊಂಡರು. ಹಾಗಾದರೆ ಇವತ್ತಿನ ಯುಗಾದಿ ಹಬ್ಬದ ಆಚರಣೆ ಹೇಗಿತ್ತು ಬನ್ನಿ ನೋಡೋಣ ಹೌದು… ಹಿಂದುಗಳಿಗೆ ಯುಗಾದಿ ಹಬ್ಬವು ಬಹಳ ವಿಶೇಷವಾದ ದಿನ. ಯುಗದ ಆದಿಯ ದಿನವಾದ ಇಂದು ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ವಿಶ್ವಕ್ಕೆ ಜನವರಿ 1 ಹೊಸ ವರ್ಷವಾದರೆ ಹಿಂದುಗಳಿಗೆ ಯುಗಾದಿಯೇ ಹೊಸ ವರ್ಷ. ಪ್ರಕೃತಿಯಲ್ಲಿ ಆಗುವ ಬದಲಾವಣೆಯೇ ಈ ಹಬ್ಬಕ್ಕೆ ಸಾಕ್ಷಿಯಾಗಿದ್ದು. ವಸಂತ ಮಾಸದ ಮೊದಲ ದಿನವನ್ನು ಜನರು ಬಹಳ ಸಂತೋಷದಿಂದ ಬರಮಾಡಿಕೊಂಡರು.
ಇನ್ನೂ…ಮುಂಜಾನೆಯಿಂದಲೇ ನಗರದ ದೇವಾಸ್ಥಾನಗಳಿಗೆ ಭಕ್ತರ ದಂಡೆ ಆಗಮಿಸಿತ್ತು. ಯುಗಾದಿ ಹಬ್ಬವಾದ ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕಾಡು ಮಲ್ಲಿಕಾರ್ಜುನಾ, ಹಾಗೂ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷವಾದ ಅಭಿಷೇಕ ಹಾಗೂ ವಿವಿಧ ಫಲ ಪುಷ್ಪಗಳಿಂದ ಅಲಂಕಾರ ಮಾಡಲಾಯಿತು. ಇನ್ನೂ…ಹೊಸ ವರ್ಷವಾದ ಹಿನ್ನೆಲೆ ಜನರು ಸಹ ತಮ್ಮ ಇಷ್ಟಾರ್ಥವು ಇಂದು ಫಲಿಸುತ್ತದೆ ಎಂಬ ಕಾರಣದಿಂದ ತಮ್ಮ ಕೋರಿಕೆಗಳನ್ನು ದೇವರ ಮುಂದಿಟ್ಟು ಬೇಡಿಕೊಂಡರು.
ಹಾಗೆಯೇ ತಮ್ಮ ತಮ್ಮ ಪ್ರೀತಿ ಪಾತ್ರರಿಗೆ ಬೇವು ಬೆಲ್ಲ ಹಂಚುವುದರ ಮೂಲಕ ಜೀವನದಲ್ಲಿ ಕಹಿ ಕಡಿಮೆ ಇರಲಿ ಸಿಹಿ ಹೆಚ್ಚು ಹೆಚ್ಚು ಬರಲಿ ಎಂದು ಶುಭಾಷಯಗಳನ್ನು ಕೋರಿದರು. ಇನ್ನೂ ತಮ್ಮ ಮನೆಯವರೊಡನೆ ಕೂಡಿ ಹಬ್ಬದ ವಿಶೇಷ ತಿನಿಸುಗಳನ್ನು ಸವಿದು ಖುಷಿ ಪಟ್ಟರು. ಒಟ್ಟಿನಲ್ಲಿ ಈ ಬಾರಿಯ ವಸಂತ ಮಾಸವನ್ನು ಜನರು ಬಹಳ ಸಂತಸದಿಂದ ಆಚರಿಸಿದರು. ಹೊಸ ಧ್ಯೇಯ ಹಾಗೂ ಹೊಸ ಆದರ್ಶದೊಂದಿಗೆ ಶುರುವಾದ ಹೊಸ ವರ್ಷವು ಎಲ್ಲಾರ ಬಾಳಲಿ ಸುಖಸಂತೋಷ ತರಲಿ ಎಂಬುದು ನಮ್ಮ ಆಶಯ.