ಬೆಂಗಳೂರು: ಬಟ್ಟೆ ಸರಿಯಿಲ್ಲವೆಂದು ವ್ಯಕ್ತಿಯೊಬ್ಬರಿಗೆ ಮೆಟ್ರೋ ಸಿಬ್ಬಂದಿ ನಿಲ್ದಾಣದ ಒಳಗೆ ಬಿಡಲು ನಿರಾಕರಿಸಿದ ಘಟನೆ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಮೆಟ್ರೋ ಸಿಬ್ಬಂದಿ ನಡೆಗೆ ಟ್ವಿಟ್ಟರ್ ಎಕ್ಸ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಂಸದ ತೇಜಸ್ವಿ ಸೂರ್ಯಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಲಾಗಿದೆ.
ಕಳೆದ ಫೆಬ್ರವರಿ ತಿಂಗಳಿನಲ್ಲಿ ರೈತರೊಬ್ಬರು ಸ್ವಚ್ಛವಾದ ಬಟ್ಟೆ ಹಾಕಿಲ್ಲವೆಂದು ರಾಜಾಜಿನಗರ ಮೆಟ್ರೋದಲ್ಲಿ ಪ್ರವೇಶ ನಿರಾಕರಿಸಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಈಗ ಮತ್ತೆ ಇದೇ ರೀತಿಯ ಘಟನೆ ನಡೆದಿದ್ದು ಸಿಬ್ಬಂದಿಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಎಂಆರ್ಸಿಎಲ್ ಮುಂದಿನ ನಡೆಯ ಬಗ್ಗೆ ಪ್ರಶ್ನಿಸಲಾಗುತ್ತಿದೆ.
ಅನ್ನದಾತನಿಗೆ ಅವಮಾನ ಮಾಡಿದ ಬಳಿಕ ಕಾರ್ಮಿಕನಿಗೆ ಕೂಡ ಮೆಟ್ರೋದಲ್ಲಿ ಅವಮಾನ ಮಾಡಿದ್ದು, ಬಟ್ಟೆ ಸರಿಯಿಲ್ಲವೆಂದು ಮೆಟ್ರೋಗೆ ಎಂಟ್ರಿ ಕೊಡಲು ಸಿಬ್ಬಂದಿ ಹಿಂದೇಟು ಹಾಕಿದ್ದಾರೆ. ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣಕ್ಕೆ ಕಾರ್ಮಿಕನೊಬ್ಬ ಬಂದಿದ್ದ, ಈ ವೇಳೆ ಶರ್ಟ್ ನಲ್ಲಿ ಗುಂಡಿ ಇಲ್ಲದ ಕಾರಣ ಕಾರ್ಮಿಕನನ್ನ ತಡೆದು ನಿಲ್ಲಿಸಿರುವ ಆರೋಪವಿದ್ದು, ಶರ್ಟ್ ನ ಗುಂಡಿಯನ್ನ ಹಾಕಿಕೊಂಡು ನೀಟಾಗಿ ಬಾ ಇಲ್ಲದಿದ್ರೆ ಎಂಟ್ರಿ ಕೊಡಲ್ಲವೆಂದ ಮೆಟ್ರೋ ಸಿಬ್ಬಂದಿ ಗದರಿದ್ದಾರೆಂಬ ಆರೋಪ ಕೇಳಿಬಂದಿದೆ.