ಬೆಂಗಳೂರು: ಹಿಂದೂಗಳ ಹೊಸ ವರ್ಷ ನಿನ್ನೆಯಿಂದ ಆರಂಭವಾಗಿದೆ. ಯುಗದ ಆದಿ ಶುರುವಾಗೋ ಯುಗಾದಿ ಹಬ್ಬದ ಮಾರನೇ ದಿನ ಹೊಸತೊಡಕು. ಇಂದು ಮನೆಯವರಲ್ಲೇ ಸೇರಿ ನಾನ್ ವೆಜ್ ಮಾಡಿ ತಿನ್ನೋದು ಸಂಪ್ರದಾಯ. ಹೊಸತೊಡಕು ಮತ್ತು ಗುರುವಾರ ರಂಜಾನ್ ಒಟ್ಟಿಗೆ ಇರುವುದರಿಂದ ಮಟನ್ಗೆ ಭಾರೀ ಬೇಡಿಕೆ ಶುರುವಾಗಿದೆ.
ಹೌದು. ಇಂದು ಹೊಸತೊಡಕಿನ ದಿನ. ನಿನ್ನೆ ಯುಗಾದಿ ಹಬ್ಬ ಮಾಡಿ, ದೇವರಿಗೆ ದೀಪ ಹಚ್ಚಿ ಬೇವು-ಬೆಲ್ಲಾ ತಿಂದು, ಹೋಳಿಗೆಯ ರುಚಿ ನೋಡಿದ್ದವರು ಇಂದು ಬಗೆ-ಬಗೆಯ ಮಾಂಸಹಾರವನ್ನ ಮಾಡಿ ಮನೆಮಂದಿಯಲ್ಲರೂ ಸೇರಿ ಹಬ್ಬ ಮಾಡುತ್ತಾರೆ. ಮಾಂಸಹಾರ ಅಂದ್ಮೇಲೆ ಅಲ್ಲಿ ಕುರಿ, ಮೇಕೆ ಮಾಂಸ ಇಲ್ಲ ಅಂದ್ರೇ ಆಗುತ್ತಾ? ನಾರ್ಮಲ್ ಆಗಿ ಒಂದು ಕೆ.ಜಿ ತರೋರು ಕೂಡ ಹಬ್ಬದ ಕಾರಣ ಹೆಚ್ಚು ಮಾಂಸವನ್ನ ಖರೀದಿಸಿ ಭರ್ಜರಿ ಬಾಡೂಟ ಮಾಡಿ ಖುಷಿ ಪಡ್ತಾರೆ.
ಈ ಸಲ ರಂಜಾನ್ ಕೂಡ ಜೊತೆಗೆ ಬಂದಿದ್ದು, ಹೀಗಾಗಿ ಮಟನ್ಗೆ ಭಾರೀ ಬೇಡಿಕೆ ಬಂದಿದ್ದು, ಕುರಿ, ಮೇಕೆಗಳ ಬೆಲೆ ಹೆಚ್ಚಾಗಿದೆ. ಅದರಲ್ಲೂ ನಾಟಿ ಮರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಬುಧವಾರ ಕೂಡ ಆಗಿರುವುದರಿಂದ ಹೆಚ್ಚಿನ ವ್ಯಾಪಾರ ಕೂಡ ಆಗುವ ನೀರಿಕ್ಷೆ ಇದ್ದು, ಈಗಾಗಲೇ ಮಾಂಸ ವ್ಯಾಪಾರಿಗಳು ಹಬ್ಬಕ್ಕಾಗಿ ಕುರಿ ಮೇಕೆಗಳನ್ನ ರೈತರಿಂದ ಖರೀದಿಸಿದ್ದಾರೆ. ರೈತರು ಸಹ ಎರಡು ಹಬ್ಬ ಒಟ್ಟಿಗೆ ಬಂದಿರೋದ್ರಿಂದ ಹೆಚ್ಚಿನ ಲಾಭಕ್ಕೆ ಮರಿಗಳನ್ನ ಮಾರಾಟ ಮಾಡುತ್ತಿದ್ದಾರೆ. ಕುರಿ-ಮೇಕೆ ಮಾಂಸಕ್ಕೆ ರೇಟ್ ಒಂದಾದ್ರೆ, ದಿ ಫೇಮಸ್ ಬನ್ನೂರು ಮಟನ್ಗೂ ಭಾರೀ ಬೇಡಿಕೆ ಶುರುವಾಗಿದೆ.
ಮಾಂಸ ಪ್ರಿಯರಂತೂ ಬನ್ನೂರು ಮಟನ್ ತಿನ್ನಲೇಬೇಕು ಅಂತ ಫಿಕ್ಸ್ ಆಗಿದ್ದಾರೆ. ಆದರೆ ಅದರ ಮಟನ್ ರೇಟ್ ಕೂಡ ಹೆಚ್ಚಾಗಿದೆ. ಅದರಲ್ಲೂ ಇವತ್ತಿನ ವಿಶೇಷ ಅಂದ್ರೆ ಗುಡ್ಡೆ ಮಾಂಸವನ್ನೇ ತಿನ್ನಬೇಕು ಅನ್ನೋದೇ ವಾಡಿಕೆ. ಒಟ್ಟಿನಲ್ಲಿ ಹೊಸತೊಡಕಿಗಾಗಿ ರಾಜ್ಯದಿಂದ ಮಾತ್ರವಲ್ಲ ಹೊರ ರಾಜ್ಯದಿಂದಲೂ ಕುರಿ, ಮೇಕೆಗಳು ಬಂದಿದ್ದು, ಕೆಜಿ ಗುಡ್ಡೆ ಮಟನ್ ಮಾಂಸಕ್ಕೆ 800 ರಿಂದ 900 ರವರಗೆ ಆಗಿದೆ. ವರ್ಷಕ್ಕೆ ಒಂದು ಸಲ ಬರೋ ಹಬ್ಬ, ರೇಟ್ ಜಾಸ್ತಿ ಅದ್ರೂ ಹಬ್ಬ ಮಾಡ್ಲೇಬೇಕು ಎಂದು ಜನ ಹೊಸತೊಡಕಿನ ಮಾಂಸಹಾರವನ್ನ ಸವಿಯಲು ಖರೀದಿ ಭರಾಟೆಯಲ್ಲಿದ್ದಾರೆ.