ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಮ್ಮ ಅಧಿಕೃತ ನಿವಾಸದಲ್ಲಿ ಸಂದರ್ಶನ ನೀಡಲು ಅಡಿದಾಸ್ ಸಂಬಾ ಟ್ರೈನರ್ಸ್ ಶೂ ಧರಿಸಿದ್ದು ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ತಾವು ಅಡಿದಾಸ್ ಬ್ರಾಂಡ್ ನ್ನು ದೀರ್ಘಾವಧಿಯಿಂದ ಇಷ್ಟಪಡುತ್ತಿರುವುದಾಗಿ ಸುನಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದು ಅಡಿದಾಸ್ ಸಂಬಾ ಸಮುದಾಯದ ಕ್ಷಮೆ ಕೋರಿದ್ದಾರೆ.
ಸಂದರ್ಶನದಲ್ಲಿ ಅಡಿದಾಸ್ ಬ್ರಾಂಡ್ ನ ಟ್ರೈನರ್ಸ್ ಶೂ ಧರಿಸುವ ಮೂಲಕ ಈ ನಿರ್ದಿಷ್ಟ ಶೂ ಆಕರ್ಷಣೆ, ಅದನ್ನು ನೋಡುವ ದೃಷ್ಟಿಯನ್ನೇ ಸುನಕ್ ಹಾಳುಗೆಡವಿದ್ದಾರೆ ಎಂಬ ಆಕ್ರೋಶ ಸಾಮಾಜಿಕ ಜಾಲತಣದಲ್ಲಿ ವ್ಯಕ್ತವಾಗಿತ್ತು.
ಸುನಕ್ ಬಿಳಿ ಶರ್ಟ್ ಹಾಗೂ ಚಿನೋಸ್ ಪ್ಯಾಂಟ್, ಕಪ್ಪು ಬಣ್ಣದ ಸಾಕ್ಸ್ ಜೊತೆಗೆ ಬೂದು, ಬಿಳಿ ಮತ್ತು ಕಪ್ಪು ಮಿಶ್ರಿತ ಸ್ನೀಕರ್ಸ್ ಧರಿಸಿದ್ದರು. ಇದಕ್ಕೆ ಕೆಂಡಾಮಂಡಲವಾಗಿರುವ ಅಡಿದಾಸ್ ಸಂಬಾ ಸಮುದಾಯ. ಈ ಶೂ ಗೆ ಶ್ರೀಮಂತ ಇತಿಹಾಸವಿದೆ ಮತ್ತು ಟ್ರೆಂಡ್ನಲ್ಲಿ ಪರಿಗಣಿಸಲ್ಪಟ್ಟಿರುವ ವ್ಯತ್ಯಾಸವನ್ನು ಹೊಂದಿದೆ. ಆದರೆ ಇವೆಲ್ಲವನ್ನೂ ಟ್ರೆಂಡಿಯಾಗಿ ಕಾಣಿಸಿಕೊಳ್ಳುವ ಯತ್ನದಲ್ಲಿ ಸುನಕ್ ಹಾಳುಗೆಡವಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಎದುರಾದ ಬೆನ್ನಲ್ಲೆ ಸ್ಪಷ್ಟನೆ ಸಹಿತ ಕ್ಷಮೆ ಕೋರಿರುವ ಸುನಕ್, ನಾನು ಹಲವು ವರ್ಷಗಳಿಂದ ಅಡಿದಾಸ್ ಬ್ರ್ಯಾಂಡ್ ನ್ನು ಮೆಚ್ಚಿಕೊಂಡಿದ್ದೇನೆ. ನಾನು ಸಂಬಾ ಸೇರಿದಂತೆ ಅಡಿದಾಸ್ ಟ್ರೈನರ್ಸ್ ಹಾಗೂ ಇನ್ನಿತರ ಸ್ನೀಕರ್ಸ್ ಗಳನ್ನು ಹಲವು ವರ್ಷಗಳಿಂದ ಬಳಸುತ್ತಿದ್ದೇನೆ, ನಾನು ಮೊದಲ ಬಾರಿಗೆ ಅಡಿದಾಸ್ ಸ್ನೀಕರ್ಸ್ ನ್ನು ಕ್ರಿಸ್ ಮಸ್ ಸಮಯದಲ್ಲಿ ತನ್ನ ಸಹೋದರನಿಂದ ಪಡೆದಿದ್ದೆ. ಆಗಿನಿಂದಲೂ ಇದೇ ಬ್ರಾಂಡ್ ನ್ನು ಬಳಸುತ್ತಿದ್ದೇನೆ ಎಂದು ಸುನಕ್ ಹೇಳಿದ್ದಾರೆ.
ಬ್ರಿಟಿಷ್ GQ ನಿಯತಕಾಲಿಕವೂ ಸುನಕ್ ನ್ನು ಟೀಕಿಸಿದ್ದು, “ತನ್ನನ್ನು ಯುವಕರಂತೆ ತೋರಿಸಿಕೊಳ್ಳುವ ಪ್ರಯತ್ನದಲ್ಲಿ, ರಿಷಿ ಸುನಕ್ ಬ್ರ್ಯಾಂಡ್ ನ್ನು ನೋಡುವ ದೃಷ್ಟಿಯನ್ನೇ ಎಲ್ಲರಲ್ಲೂ ಹಾಳುಗೆಡವಿದ್ದಾರೆ” ಎಂದು ಹೇಳಿದೆ. ಪಾದರಕ್ಷೆಗಳ ಇತಿಹಾಸಕಾರ ಎಲಿಜಬೆತ್ ಸೆಮ್ಮೆಲ್ಹ್ಯಾಕ್ ಸಹ ಸುನಕ್ ನಡೆಯನ್ನು ಟೀಕಿಸಿದ್ದಾರೆ.