ಕೊಯಮತ್ತೂರು:- ನಟ ಕಮಲ್ ಹಾಸನ್ ತನ್ನ ತಲೆಯನ್ನು ಮಾನಸಿಕ ಕೇಂದ್ರದಲ್ಲಿ ಟೆಸ್ಟ್ ಮಾಡಿಸೋದು ಒಳ್ಳೇದು ಎಂದು ಅಣ್ಣಾಮಲೈ ಕೌಂಟರ್ ಕೊಟ್ಟಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದ ರಾಜಧಾನಿಯನ್ನು ನಾಗ್ಪುರಕ್ಕೆ ಸ್ಥಳಾಂತರಿಸಲಾಗುವುದು ಎಂಬ ನಟ-ರಾಜಕಾರಣಿ ಕಮಲ್ ಹಾಸನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಮಲ್ ಹಾಸನ್ ಮಾನಸಿಕ ಪುನರ್ವಸತಿ ಕೇಂದ್ರದಲ್ಲಿ ತಮ್ಮ ತಲೆಯನ್ನು ಪರೀಕ್ಷಿಸಬೇಕು ಎಂದು ಟಾಂಗ್ ನೀಡಿದ್ದಾರೆ. ಕಮಲ್ ಹಾಸನ್ ಅಥವಾ ಬೇರೆ ಯಾರೇ ಆಗಿರಲಿ, ಯಾರೇ ಹೇಳಿದರೂ ಅವರ ಮೆದುಳನ್ನು ಮಾನಸಿಕ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಎಡ ಮತ್ತು ಬಲ ಮಿದುಳುಗಳೆರಡೂ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ, ಅವರು ಪ್ರಜ್ಞೆ ಹೊಂದಿದ್ದಾರೆಯೇ ಮತ್ತು ಅವರು ತಮ್ಮ ಆಹಾರವನ್ನು ಸರಿಯಾಗಿ ತಿನ್ನುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು ಎಂದು ಟೀಕಿಸಿದ್ದಾರೆ.
ಭಾರತದ ರಾಜಧಾನಿಯನ್ನು ನಾಗ್ಪುರಕ್ಕೆ ಹೇಗೆ ಬದಲಾಯಿಸಬಹುದು? ನಾಗ್ಪುರದಲ್ಲಿ ಆರ್ಎಸ್ಎಸ್ ಕಚೇರಿ ಇದೆ ಎಂದು ಕಮಲ್ ಹಾಸನ್ ಅರಿತುಕೊಂಡು ಇದ್ದಕ್ಕಿದ್ದಂತೆ ಭಾರತದ ರಾಜಧಾನಿಯನ್ನು ನಾಗ್ಪುರಕ್ಕೆ ಸ್ಥಳಾಂತರಿಸಲಾಗುವುದು ಎಂದು ತೀರ್ಮಾನಿಸಿದ್ದಾರೆ. ಚೆನ್ನೈ ದೇಶದ ಬೇಸಿಗೆ/ಚಳಿಗಾಲದ ರಾಜಧಾನಿಯಾಗಬೇಕು ಎಂದು ಅವರು ಹೇಳಿದ್ದರೆ, ನಾನು ಅದನ್ನು ಒಪ್ಪಿಕೊಳ್ಳಬಹುದು. ಆದರೆ ಅವರು ಈ ರೀತಿ ಹೇಳಿರುವುದರಿಂದ ಕಮಲ್ ಹಾಸನ್ ಅವರ ತಲೆಯನ್ನು ಮಾನಸಿಕ ಪುನರ್ವಸತಿ ಕೇಂದ್ರದಲ್ಲಿ ಪರೀಕ್ಷಿಸಬೇಕು ಎಂದು ಹೇಳಿದರು.
ಡಿಎಂಕೆಯಿಂದ ರಾಜ್ಯಸಭಾ ಟಿಕೆಟ್ಗಾಗಿ ಲಾಬಿ ಮಾಡಲು ಕಮಲ್ ಹಾಸನ್ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ, ಕಮಲ್ ಹಾಸನ್ ಅವರು ಪ್ರಜ್ಞಾಪೂರ್ವಕವಾಗಿ ಮಾತನಾಡುತ್ತಿದ್ದರೆ ಅಥವಾ ಅವರು ಡಿಎಂಕೆಯಿಂದ ರಾಜ್ಯಸಭಾ ಟಿಕೆಟ್ಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರಾ ಅನ್ನೋದನ್ನು ಮೊದಲು ನಿರ್ಧರಿಸಬೇಕು. ಅವರು ವೈದ್ಯರ ಸಲಹೆಯನ್ನು ಪಡೆಯಬೇಕು. ಅವರು ಉತ್ತಮ ಮನೋವೈದ್ಯರನ್ನು ಕಾಣಬೇಕು ಮತ್ತು ವೃತ್ತಿಪರ ಸಲಹೆಯನ್ನು ಪಡೆಯಬೇಕು’ ಎಂದು ಅಣ್ಣಾಮಲೈ ಹೇಳಿದರು.