ಮುಂಬೈ: ವ್ಯಕ್ತಿಯೊಬ್ಬನಿಗೆ ಪ್ರತಿ ತಿಂಗಳು 10,000 ರೂ. ಜೀವನಾಂಶ ನೀಡುವಂತೆ ಆತನ ಮಾಜಿ ಪತ್ನಿಗೆ ಬಾಂಬೆ ಹೈಕೋರ್ಟ್ (Bombay High Court) ನಿರ್ದೇಶನ ನೀಡಿದೆ. ಮಹಿಳೆಯ ಮಾಜಿ ಪತಿಯು ಅನಾರೋಗ್ಯದ ಕಾರಣದಿಂದ ದುಡಿಯಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಇದರಿಂದಾಗಿ ಆದಾಯದ ಮೂಲ ಹೊಂದಿರುವ ಮಹಿಳೆ ಜೀವನಾಂಶವನ್ನು ಪಾವತಿಸಬೇಕು. ಜೀವನಾಂಶ ಪಾವತಿಸುವ ಹೊಣೆ ಮಹಿಳೆಯದ್ದಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹಿಂದೂ ವಿವಾಹ ಕಾಯಿದೆಯ (Hindu Marriage Act) ಸೆಕ್ಷನ್ 24ರ ನಿಬಂಧನೆಗಳು `ಸಂಗಾತಿ’ ಪದವನ್ನು ಸೂಚಿಸುತ್ತದೆ. ಇದು ತನ್ನನ್ನು ಕಾಪಾಡಿಕೊಳ್ಳಲು ಸಾಧ್ಯವಾಗದ ಪತಿ ಅಥವಾ ಪತ್ನಿಯನ್ನು ಉಲ್ಲೇಖಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅನಾರೋಗ್ಯದಿಂದಾಗಿ ತಾನು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬ್ಯಾಂಕ್ ಮ್ಯಾನೇಜರ್ ಆಗಿ ಉದ್ಯೋಗದಲ್ಲಿದ್ದ ತನ್ನ ಮಾಜಿ ಪತ್ನಿಯಿಂದ ಜೀವನಾಂಶಕ್ಕೆ ಅರ್ಹನಾಗಿದ್ದೇನೆ ಎಂದು ವ್ಯಕ್ತಿ ಕೌಟುಂಬಿಕ ನ್ಯಾಯಾಲಯದ ( Family Court) ಮೊರೆ ಹೋಗಿದ್ದ.
ಇದರಂತೆ ಮಾರ್ಚ್ 2020 ರಲ್ಲಿ ಮಾಸಿಕ 10,000 ರೂ. ಹಣವನ್ನು ಜೀವನಾಂಶವಾಗಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಸಿವಿಲ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಹಿಳೆ, ಹೈಕೋರ್ಟ್ ಮೆಟ್ಟಿಲೇರಿದ್ದಳು. ಇದೀಗ ಹೈಕೋರ್ಟ್ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ಕೆಳಹಂತದ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ. ಗೃಹ ಸಾಲದ ಮರುಪಾವತಿ ಮತ್ತು ಅಪ್ರಾಪ್ತ ಮಗುವಿನ ನಿರ್ವಹಣೆಯ ಹೊಣೆಗಾರಿಕೆಯನ್ನು ಈಗಾಗಲೇ ಹೊಂದಿದ್ದೇನೆ.
ಹೀಗಾಗಿ ಆರ್ಥಿಕ ನಿರ್ವಹಣೆಯನ್ನು ಪಾವತಿಸುವ ಸ್ಥಿತಿಯಲ್ಲಿಲ್ಲ ಎಂದು ಮಹಿಳೆ ತನ್ನ ಮನವಿಯಲ್ಲಿ ತಿಳಿಸಿದ್ದಳು. ಅಲ್ಲದೇ 2019 ರಲ್ಲಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಆ ಸಮಯದಲ್ಲಿ (ಕೆಳ ನ್ಯಾಯಾಲಯವು ತನ್ನ ಆದೇಶವನ್ನು ಹೊರಡಿಸಿದಾಗ) ಯಾವುದೇ ಆದಾಯದ ಮೂಲವನ್ನು ಹೊಂದಿರಲಿಲ್ಲ ಎಂದು ಹೇಳಿಕೊಂಡಿದ್ದಳು. ಆದರೆ ಹಣಕಾಸಿನ ಮೂಲವನ್ನು ಮಹಿಳೆ ಬಹಿರಂಗಪಡಿಸಿರಲಿಲ್ಲ. ಅಲ್ಲದೇ ತನಗೆ ಆದಾಯದ ಮೂಲ ಇಲ್ಲ ಎಂಬುದನ್ನು ಮಹಿಳೆ ಸಾಬೀತುಪಡಿಸಿಲ್ಲ ಎಂಬುದನ್ನು ನ್ಯಾಯಾಲಯ ವಿಚಾರಣೆ ವೇಳೆ ಪರಿಗಣಿಸಿ ಜೀವನಾಂಶ ನೀಡುವಂತೆ ಆದೇಶಿಸಿದೆ.