ಬುಲ್ ಬುಲ್ ಬೆಡಗಿ ನಟಿ ರಚಿತಾ ರಾಮ್ ಸದ್ಯ ಸಿನಿಮಾಗಳ ಜೊತೆಗೆ ರಿಯಾಲಿಟಿ ಶೋ ಜರ್ಡ್ ಆಗಿಯೂ ಸದ್ದು ಮಾಡ್ತಿದ್ದಾರೆ. ಸದ್ಯ ರಚಿತಾ ಸಂಜು ವೆಡ್ಸ್ ಗೀತಾ 2 ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ಈ ಮಧ್ಯೆ ದುನಿಯಾ ವಿಜಯ್ ನಟನೆಯ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್ ನಲವತ್ತರ ವಯಸ್ಸಿನ ಪಾತ್ರ ಮಾಡಲಿದ್ದಾರೆ.
ಸದಾ ಗ್ಲಾಮರಸ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ತಿದ್ದ ರಚಿತಾ ಇದೀಗ 40ರ ಹರೆಯದ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಜಂಟಲ್ ಮ್ಯಾನ್, ಗುರುಶಿಷ್ಯರು ಚಿತ್ರಗಳ ನಿರ್ದೇಶಕ ಹಾಗೂ ಕಾಟೇರ ಚಿತ್ರದ ಲೇಖಕ ಜಡೇಶ ಕೆ ಹಂಪಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಮಹಾಲಕ್ಷ್ಮೀಪುರದ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ರಚಿತಾರಾಮ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ(ಮೋನಿಕಾ) ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. “ಡೇರ್ ಡೆವಿಲ್ ಮುಸ್ತಫಾ” ಖ್ಯಾತಿಯ ಶಿಶಿರ್ ಸಹ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದು ನಾನು ಕಂಡ, ಕೇಳಿದ ಹಾಗೂ ನೋಡಿದ ನೈಜ ಕಥೆ ಎಂದು ಮಾತನಾಡಿದ ನಿರ್ದೇಶಕ ಜಡೇಶ ಕೆ ಹಂಪಿ, ಇದು ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ. ಕೋಲಾರ ಭಾಗದಲ್ಲಿ ನಡೆಯುವ ಕಥೆಯಾಗುವುದರಿಂದ ಸಂಭಾಷಣೆ ಕೋಲಾರದ ಭಾಷೆಯಲ್ಲೇ ಇರುತ್ತದೆ. ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. ಅವರು ಕೋಲಾರದವರೆ ಆಗಿರುವುದು ವಿಶೇಷ.ಇದು 90 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶಿವರಾಮ ಕಾರಂತರ “ಚೋಮನ ದುಡಿ”ಯ ಚೋಮನ ಪಾತ್ರ ಈ ಚಿತ್ರಕ್ಕೆ ಸ್ಪೂರ್ತಿ. ಹಾಗಂತ “ಚೋಮನ ದುಡಿ” ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಇನ್ನು ಈ ಚಿತ್ರವನ್ನು ಜಗದೀಶ್ ಅವರು ನಿರ್ಮಿಸಬೇಕಿತ್ತು. ಕಾರಣಾಂತರದಿಂದ ಆಗಲಿಲ್ಲ. ಆನಂತರ ಸ್ನೇಹಿತರೊಬ್ಬರ ಮೂಲಕ ಸತ್ಯಪ್ರಕಾಶ್ ಅವರ ಪರಿಚಯವಾಯಿತು. ಅವರು ಹಾಗೂ ಅವರ ಮಗ ಸೂರಜ್ ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡರು. ಕೇವಲ ಇಪ್ಪತ್ತು ದಿನಗಳಲ್ಲಿ ಚಿತ್ರಕ್ಕೆ ಚಾಲನೆ ದೊರಕ್ಕಿದೆ. ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ಹಾಕಲಾಗುತ್ತಿದೆ. ಉಳಿದಂತೆ ಕೋಲಾರ, ಮೈಸೂರಿನಲ್ಲೂ ಚಿತ್ರೀಕರಣ ನಡೆಯಲಿದೆ. ನಾಯಕ ವಿಜಯ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತಾರೆ ನಿರ್ದೇಶಕರು.
ಈ ಚಿತ್ರದ ಮೂಲಕ ದುನಿಯಾ ವಿಜಯ್ ಪುತ್ರಿ ಕೂಡ ಸಿನಿಮಾ ರಂಗಕ್ಕೆ ಎಂಟ್ರಿಕೊಡ್ತಿದ್ದಾರೆ. ಈ ಹಿಂದೆ ಜಾಣಿ ಮೇರಾ ನಾಮ್ ಸಿನಿಮಾದಲ್ಲಿ ಒಂದಾಗಿದ್ದ ವಿಜಯ್ ಹಾಗೂ ರಚಿತಾ ರಾಮ್ ಇದೀಗ ಮತ್ತೆ ಒಂದಾಗ್ತಿದ್ದಾರೆ.