ಬೆಂಗಳೂರು: 40 ವರ್ಷಗಳಿಂದ ಬೇಡಿಕೆಯಾಗಿದ್ದ ಸಬ್ ಅರ್ಬನ್ ರೈಲು ಯೋಜನೆಗೆ ಈಗಾಗಲೇ ಕೇಂದ್ರದಿಂದ ಒಪ್ಪಿಗೆ ದೊರೆತಿದೆ ಎಂದು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದ್ದಾರೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ 40 ವರ್ಷಗಳಿಂದ ಬೇಡಿಕೆಯಾಗಿದ್ದ ಸಬ್ ಅರ್ಬನ್ ರೈಲು ಯೋಜನೆಗೆ ಈಗಾಗಲೇ ಕೇಂದ್ರದಿಂದ ಒಪ್ಪಿಗೆ ದೊರೆತಿದೆ.
ಉಪನಗರ ವರ್ತುಲ ರಸ್ತೆ ಯೋಜನೆಗೂ ಮಂಜೂರಾತಿ ದೊರೆತಿದೆ. ಆರ್.ವಿ.ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗಿನ ಹಳದಿ ಮೆಟ್ರೋ ರೈಲು ಮಾರ್ಗ ಸೆಪ್ಟೆಂಬರ್ನಲ್ಲಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು. ಪ್ರಧಾನಿ ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆ ಬೆಂಗಳೂರಿನಲ್ಲಿ ಅಮೆರಿಕ ದೂತವಾಸ ಕಚೇರಿ ಆರಂಭಕ್ಕೆ ಒಪ್ಪಿಗೆ ದೊರೆತಿದೆ. ಆದರೆ, ಕಾಂಗ್ರೆಸ್ ಸರ್ಕಾರ ಜಾಗ ನೀಡುತ್ತಿಲ್ಲ ಎಂದು ಆರೋಪಿಸಿದರು.
ಕೋವಿಡ್ ಸಾಂಕ್ರಾಮಿಕವನ್ನು ಎದುರಿಸುವಲ್ಲಿ ತಾವು ಹಾಗೂ ತಮ್ಮ ಕಚೇರಿಯ ಕಾರ್ಯನಿರ್ವಹಣೆ ಕುರಿತು ಇದೇ ಸಂದರ್ಭದಲ್ಲಿ ವಿವರಿಸಿದ ಅವರು, ಬೆಡ್ ಬುಕಿಂಗ್ ಪದ್ಧತಿಯಲ್ಲಿದ್ದ ಅಕ್ರಮಗಳನ್ನು ಬಯಲಿಗೆಳೆದು ವೈಪರೀತ್ಯಗಳನ್ನು ಸರಿಪಡಿಸಿದ ನಂತರ, 4 ಸಾವಿರಕ್ಕೂ ಅಧಿಕ ಹಾಸಿಗೆಗಳು ಸೋಂಕಿತರಿಗೆ ಲಭ್ಯವಾದವು. ದೇಶದಲ್ಲೇ ಅತಿ ದೊಡ್ಡ ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಯಾಂಕ್ ಸ್ಥಾಪಿಸುವ ಮೂಲಕ ನೂರಾರು ಜನರ ಜೀವ ಉಳಿದಿದೆ ಎಂದು ತಿಳಿಸಿದರು.