ಡಾಲಿ ಧನಂಜಯ್ ನಟನೆಯ ಕೋಟಿ ಸಿನಿಮಾದ ಮೂಲಕ ಪ್ರಮುಖ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್ ಇದೀಗ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದೆ. ಇತ್ತೀಚೆಗಷ್ಟೇ ಕೋಟಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಇದೀಗ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.
ಕನ್ನಡದ ಪ್ರತಿಭಾವಂತ ನಟ ಡಾಲಿ ಧನಂಜಯ ನಟನೆಯ ಕೋಟಿ ಸಿನಿಮಾವನ್ನು ಪರಮ್ ನಿರ್ದೇಶಿಸುತ್ತಿದ್ದಾರೆ. ಬೈಪನ್ ಭಾರಿ ದೇವಾ (ಮರಾಠಿ), ಆರ್ಟಿಕಲ್ 370, ತೇರಿ ಬಾತೋಂಮೆ ಐಸಾ ಉಲ್ಜಾಜಿಯಾ, ಶೈತಾನ್ ಮತ್ತು ಲಾಪಾತಾ ಲೇಡೀಸ್ ಹೀಗೆ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ಜಿಯೋ ಸ್ಟುಡಿಯೋಸ್ ನೀಡಿದೆ. ಈಗ ಕನ್ನಡ ಮಾರುಕಟ್ಟೆಗೆ ಪ್ರವೇಶಿಸುವ ಮೂಲಕ ತನ್ನ ಸ್ಥಾನವನ್ನು ಈ ನಿರ್ಮಾಣ ಸಂಸ್ಥೆ ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.
ಧನಂಜಯ್ ತಮ್ಮ ಹೊಸ ಸಿನಿಮಾ ʼಕೋಟಿʼಯ ಪಾತ್ರದ ಬಗ್ಗೆ ಎಕ್ಸೈಟ್ ಆಗಿದ್ದು ಸಿನಿಮಾದಲ್ಲಿ ಅಭಿನಯದ ಹೊಸ ಮಗ್ಗುಲುಗಳನ್ನು ಅನ್ವೇಷಿಸಿದ್ದಾರೆ. ‘ಒಂದೇ ಒಂದು ಕೋಟಿ ಸಿಕ್ಕಿಬಿಟ್ಟರೆ ಅಥವಾ ದುಡಿಯೋದಕ್ಕಾದರೆ ಸೆಟ್ಲ್ ಆಗಿಬಿಡಬಹುದು ಎಂದು ಎಲ್ಲರೂ ಅಂದ್ಕೊಳ್ತಿರ್ತಾರೆ. ನಮ್ ಕೋಟಿನೂ ಅಷ್ಟೇ. ಎಲ್ಲಾ ಮನೆಗಳಲ್ಲೂ ಈ ಕೋಟಿಯಂಥ ಅಣ್ಣ, ತಮ್ಮ, ಮಗ ನಿಮಗೆ ಸಿಕ್ತಾರೆ. ಕಷ್ಟಪಟ್ಟು ದುಡಿದು ಎಲ್ಲಾ ಸರಿ ಮಾಡ್ಕೋಬಹುದು ಅಂದ್ಕೋತಾ ಇರ್ತಾರೆʼ ಎಂದು ಪಾತ್ರದ ಬಗ್ಗೆ ಹೇಳಿದ್ದಾರೆ.
ಮಜಾ ಅಂದ್ರೆ ಎಲ್ರೊಳಗೂ ಕೋಟಿಯಂಥ ಒಬ್ಬ ವ್ಯಕ್ತಿ ಇರ್ತಾನೆ. ಈ ಪಾತ್ರ, ನನ್ನೊಳಗಿನ ಕೋಟಿಯನ್ನು ನನಗೆ ಪರಿಚಯಿಸಿದೆ. ಹಾಗೆಯೇ ನಿಮ್ಮೊಳಗಿನ ಕೋಟಿಯನ್ನು ಪತ್ತೆ ಮಾಡಲು ನೀವು ಈ ಸಿನಿಮಾ ನೋಡಬೇಕು’ ಎಂದು ಸೇರಿಸಲು ಅವರು ಮರೆಯುವುದಿಲ್ಲ. ಈ ಸಿನಿಮಾ ನಿರ್ದೇಶಿಸುತ್ತಿರುವುದು ಪರಮ್ (Param). ಇದು ಅವರ ಚೊಚ್ಚಲ ಸಿನಿಮಾ. ಸಿನಿಮಾ ನಿರ್ದೇಶಕನಾಗಿ ಮೊದಲ ಅನುಭವವಾದರೂ ಕತೆ ಹೇಳುವುದು ಅವರಿಗೆ ಹೊಸದಲ್ಲ. ಟೆಲಿವಿಷನ್ ಚಾನೆಲ್ಲಿನಲ್ಲಿ ಹಲವು ಯಶಸ್ವೀ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ರೂಪಿಸಿದ ಅನುಭವವಿರುವ ಅವರು ಇಲ್ಲಿ ವಿಶಾಲ ಕ್ಯಾನ್ವಾಸಿನಲ್ಲಿ ಕತೆ ಹೇಳುವ ಸವಾಲನ್ನು ಸ್ವೀಕರಿಸಿದ್ದಾರೆ.
‘ನನ್ನ ಕನಸು ಈ ಸಿನಿಮಾ ಮೂಲಕ ನಿಜವೇ ಆಗಿಬಿಟ್ಟಿರುವುದನ್ನು ವಿವರಿಸಲು ಶಬ್ದಗಳಿಲ್ಲ. ಇದು ಸಾಧ್ಯ ಆಗಿದ್ದು ಜಿಯೋ ಸ್ಟುಡಿಯೋಸ್ ಮತ್ತು ಜ್ಯೋತಿ ದೇಶಪಾಂಡೆ ನನ್ನ ಮೇಲೆ ಇಟ್ಟ ನಂಬಿಕೆಯಿಂದ. ಒಳ್ಳೆ ಕತೆಗಳನ್ನು ಹೇಳಬೇಕು, ಬೇರೆ ಕತೆಗಳನ್ನು ಹೇಳಬೇಕು, ಬೇರೆ ಧ್ವನಿಗಳು ಕೇಳಿಸಬೇಕು ಅನ್ನೋದು ಜಿಯೋ ಸ್ಟುಡಿಯೋಸ್ ನ ಮೂಲ ಉದ್ದೇಶ. ಕನ್ನಡದಲ್ಲೂ ಈ ಇದು ಮುಂದುವರೆಯಬೇಕು ಅನ್ನೋದರ ಕಡೆಗೆ ನಮ್ಮ ತಂಡ ಕೆಲಸ ಮಾಡುತ್ತೆʼ ಎನ್ನುತ್ತಾರೆ ಜಿಯೋ ಸ್ಟುಡಿಯೋಸ್ ನ ಕನ್ನಡದ ಮುಖ್ಯಸ್ಥರೂ ಆಗಿರುವ ಪರಮ್.
ಧನಂಜಯ್ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ. ಹಲವು ಜಾಹೀರಾತುಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಕೊಡಗಿನ ಮೂಲದ ಕನ್ನಡದ ನಟಿ ಮೋಕ್ಷಾಗೆ ಇದು ಮಹತ್ವದ ಸಿನಿಮಾ. ‘ಸಪ್ತ ಸಾಗರದಾಚೆʼ ಸಿನಿಮಾದ ನಂತರ ಜನರಿಗೆ ಹೆಚ್ಚು ಪರಿಚಯವಾದ ರಮೇಶ್ ಇಂದಿರಾ ಈ ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದಾರೆ. ಕೋಟಿ ಸಿನಿಮಾ ಡ್ರಾಮಾ ಥ್ರಿಲ್ಲರ್ ಎಳೆಯನ್ನು ಹೊಂದಿದೆ.