ಬೆಂಗಳೂರು: ಲೋಕಸಭೆ ಚುನಾವಣೆಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಈಗಾಗಲೇ ಎಲ್ಲ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕೂಡ ಕೈಗೊಂಡಿದ್ದಾರೆ. ಇದೀಗ ಮನೆಯಲ್ಲೇ ಅಂಚೆ ಮತದಾನ ಆರಂಭವಾಗಿದೆ. ಈ ಸೌಲಭ್ಯ ವೃದ್ಧರು ಯಾವ ರೀತಿ ಬಳಸಿಕೊಳ್ತಿದ್ದಾರೆ ಎಂದು ನೋಡೋಣ ಬನ್ನಿ.. ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಏಪ್ರಿಲ್ 26 ಮತ್ತು ಮೇ 7ರಂದು ಮತದಾನ ನಡೆಯಲಿದೆ. ಇನ್ನು 85 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರಿಗೆ ಅಂಚೆ ಮತದಾನ ಆರಂಭಗೊಂಡಿದೆ.
ಹೌದು.. ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಅಧಿಕಾರಿಗಳ ಕಣ್ಗಾವಲಿನಲ್ಲಿ ನಡೆಯಲಿದೆ ಮತದಾನ ಶುರುವಾಗಿದೆ. ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣಕ್ಕೆ 85 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಗೆ ಮತದಾನ ಅವಕಾಶ ಕಲ್ಪಿಸಿದೆ. ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 95,128 85 ವರ್ಷ ಮೇಲ್ಪಟ್ಟ ಹಾಗೂ 22,222 ವಿಶೇಷ ಚೇತನರನ್ನು ಗುರುತಿಸಲಾಗಿದೆ. ಇವರಲ್ಲಿ 85 ವರ್ಷ ಮೇಲ್ಪಟ್ಟ 6206 ಮತದಾರರು ಹಾಗೂ ವಿಶೇಷ ಚೇತನ 201 ಮತದಾರರು ಅಂಚೆ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದರು.
ಮನೆ ಮನೆಗೆ ಭದ್ರತಾ ಸಿಬ್ಬಂದಿ, ವೀಡಿಯೋಗ್ರಾಫರ್ ಒಳಗೊಂಡಿರುವ ಮತಗಟ್ಟೆ ತಂಡ ತೆರಳಿ ಮತದಾನ ಗುರುತಿನ ಚೀಟಿ ಪರಿಶೀಲಿಸಿ ಬಳಿಕ ಗೌಪ್ಯ ಮತದಾನಕ್ಕಾಗಿ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ಮಾಡಿತು. ಈ ಎಲ್ಲ ಪ್ರಕ್ರಿಯೆಯನ್ನು ವೀಡಿಯೋಗ್ರಫಿ ಮೂಲಕ ಸೆರೆಹಿಡಿಯಲಾಯಿತು. ಇನ್ನು 18ರವರೆಗೆ ಮನೆಯಿಂದಲೇ ಗೌಪ್ಯ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಂದ ಮತದಾನ ಪ್ರಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯ ರಾಜ್ಯ ರಾಜಧಾನಿಯಲ್ಲಿ 80 ವರ್ಷ ಮೇಲ್ಪಟ್ಟವರು ಮತ್ತು ವಿಶೇಷ ಚೇತನರ ಅಂಚೆ ಮೂಲಕ ಮತದಾನಕ್ಕೆ ಚಾಲನೆ ಸಿಕ್ಕಿದೆ