ಬಿಜೆಪಿ ವಿರುದ್ದ ಪದೇ ಪದೇ 40% ಕಮಿಷನ್ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸ ಮತ್ತು ಪುತ್ರ ಪ್ರಶಾಂತ್ ಮನೆಯಲ್ಲಿ ಸಿಕ್ಕ ಹಣ ಬ್ರಹ್ಮಾಸ್ತ್ರವಾಗಿದೆ. ಇದನ್ನೇ ಚುನಾವಣಾ ಅಸ್ತ್ರವಾಗಿಸಿಕೊಂಡಿರುವ ಕೈ ಪಡೆ ಸರ್ಕಾರದ ವಿರುದ್ಧ ಬೀದಿಗಿಳಿದು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದ್ರು ಕೈ ನಾಯಕರು. ಇವತ್ತಿನ ಕೈ ಪ್ರತಿಭಟನೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.. ಕಳೆದ ಹಲವು ತಿಂಗಳುಗಳಿಂದ ಅದರಲ್ಲೂ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ಮೋದಿಗೆ ಪತ್ರ ಬರೆದ ನಂತರ ನಿರಂತರವಾಗಿ 40%. ಕಮಿಷನ್ ಸರ್ಕಾರ ಎಂದು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರ ಪ್ರಶಾಂತ್ ಡೀಲ್ ಪ್ರಕಾಣದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ಸ್ಪಷ್ಟ ಸಾಕ್ಷಿ ಸಿಕ್ಕಂತೆ ಆಗಿದೆ.
ಇದೇ ವಿಚಾರವನ್ನು ಚುನಾವಣಾ ಬ್ರಹ್ಮಾಸ್ತ್ರ ವಾಗಿಟ್ಟುಕೊಂಡು ಕಾಂಗ್ರೆಸ್ ಇಂದು ಸಿಎಂ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬೃಹತ್ ಪ್ರತಿಭಟನೆ ನಡೆಸಿತು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಪ್ರತಿಭಟನೆ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಾಯಕರು ನೇರವಾಗಿ ಸಿಎಂ ಬೊಮ್ಮಾಯಿ ನಿವಾಸಕ್ಕೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದ್ರು.ಆದ್ರೆ ಪೊಲೀಸರು ಸಿದ್ದರಾಮಯ್ಯ, ಸುರ್ಜೀವಾಲಾ ಸೇರಿದಂತೆ ಕಾಂಗ್ರೆಸ್ ನಾಯಕರನ್ನ ವಶಕ್ಕೆ ಪಡೆದು ಪ್ರತಿಭಟನೆಯನ್ನು ಹತ್ತಿಕ್ಕಿದ್ರು. ಇದಕ್ಕೂ ಮುನ್ನಾ ಕಾಂಗ್ರೆಸ್ ಭವನದಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ,ಪ್ರಧಾನಿ ಮೋದಿ,ಅಮಿಶ್ ಶಾ,ಸಿಎಂ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಕೇವಲ ಪ್ರಶಾಂತ್ ಮಾಡಾಳ್ ಅವರನ್ನು ಬಂಧಿಸುವುದಲ್ಲ,
ಅವರ ತಂದೆ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ತಕ್ಷಣ ಬಂಧಿಸಬೇಕು ಮತ್ತು ಬೊಮ್ಮಾಯಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ರು.ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸೇರಿಕೊಂಡು ಮಂತ್ರಿಗಳು, ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಇಂತಿಷ್ಟು ಲಂಚ ಕಲೆಕ್ಷನ್ ಮಾಡಿಕೊಡಬೇಕು ಎಂದು ನಿಗದಿ ಮಾಡಿದ್ದಾರೆ. ಅವರಿಗೆ ಈ ಬಾರಿ ಜಾತಿ, ಧರ್ಮಗಳ ಆಧಾರದಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅರಿವಾಗಿದೆ. ಮುಂದಿನ ಚುನಾವಣೆಯಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಲು ಕನಿಷ್ಠ 100 ಕೋಟಿ ಖರ್ಚು ಮಾಡಿದರೂ ಆಶ್ಚರ್ಯ ಇಲ್ಲ.
ಬೊಮ್ಮಾಯಿಗೆ ಮಾನ ಮರ್ಯಾದಿ ಇದ್ದರೆ ಮಾಡಾಳ್ ವಿರೂಪಾಕ್ಷಪ್ಪನನ್ನು ಈ ಕೂಡಲೇ ಬಂಧಿಸಬೇಕು ಮತ್ತು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನಿಮ್ಮ ಭ್ರಷ್ಟಾಚಾರಕ್ಕೆ ಇದಕ್ಕಿಂತ ದಾಖಲೆ ಬೇರೆ ಬೇಕಾ? ಬಿಜೆಪಿ ನಾಯಕರಿಗೆ ಎಂದು ಪ್ರಶ್ನೆಗಳ ಕೇಳಿದ್ರು. ಪ್ರಧಾನಿ ಮೋದಿ ಮರ್ ಜಾ ಎಂದು ಕಾಂಗ್ರೆಸ್ ನವರು ಹೇಳುತ್ತಾರೆ ಎಂದು ಮೋದಿ ಅವರು ಜನರ ಸಿಂಪತಿ ಗಳಿಸಲು ನಾಟಕ ಮಾಡುತ್ತಿದ್ದಾರೆ. ನಿಮ್ಮ ಬಳಿ ಇಂಟಲಿಜೆನ್ಸ್ ಇದೆ, ರಾ ಇದೆ, ಹೀಗೆ ಕೂಗಿದವರನ್ನು ಜೈಲಿಗೆ ಹಾಕೋದಲ್ವಾ ಮೋದಿಜಿ? ಇನ್ನು ಯಾಕೆ ಸುಮ್ಮನಿದ್ದೀರಿ? ಮೋದಿ ಅವರಿಗೆ ಯಡಿಯೂರಪ್ಪ ಅವರ ಮೇಲೆ ನಿಜವಾಗಿ ಕಾಳಜಿ ಇಲ್ಲ.
ಅವರ ಮೇಲೆ ಇದ್ದಕ್ಕಿದ್ದಂತೆ ಸಿಂಪತಿ ಬಂದಂತೆ ನಾಟಕ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಕೇಂದ್ರ ನಾಯಕರು ಕೇಳಿದಷ್ಟು ದುಡ್ಡು ಕಳಿಸುತ್ತಿರಲಿಲ್ಲ ಎಂದು ಕಾಣುತ್ತೆ ಅದಕ್ಕೆ ಅವರನ್ನು ಅಧಿಕಾರದಿಂದ ಇಳಿಸಿ, ಆರ್,ಎಸ್,ಎಸ್ ನ ಕೈಗೊಂಬೆಯಂತೆ ಕೆಲಸ ಮಾಡುವ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಪಾಪ ಯಡಿಯೂರಪ್ಪ ಅವರು ಕಣ್ಣೀರು ಹಾಕುತ್ತಾ ಅಧಿಕಾರದಿಂದ ಇಳಿಯುವ ಹಾಗೆ ಮಾಡಿದ್ರಲ್ಲ ಮೋದಿಜಿ, ಈಗ ಓಟಿಗಾಗಿ ಅವರ ಕೈ ಹಿಡಿದುಕೊಂಡು ಹೊಗಳುತ್ತೀರ? ಸಾಕಪ್ಪ ಸಾಕು 40% ಸರ್ಕಾರಎಂದು ಇಂದು ಜನ ಹೇಳುತ್ತಿದ್ದಾರೆ. ಸಾರ್ವಜನಿಕ ಸಭೆಗಳಲ್ಲಿ 40% ಕಮಿಷನ್ ಹಗರಣದ ಬಗ್ಗೆ ಮಾತನಾಡಿ ಸರ್ ಎಂದು ಜನರೇ ಕೇಳುತ್ತಿದ್ದಾರೆ ಎಂದು ರಾಜ್ಯಕ್ಕೆ ಪದೇ ಇದೇ ಆಗಮಿಸಿತ್ತಿರುವ ಮೋದಿಗೆ ಟಾಂಗ್ ನೀಡಿದ್ರು ಟಗರು.