ಬೆಂಗಳೂರು: ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮತ್ತೊಬ್ಬ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರಾಗಿದ್ದ ಪ್ರವೀಣ್ ಹತ್ಯೆ ಬಳಿಕ ಆರೋಪಿ ತೌಫಿಲ್ ತಲೆಮರೆಸಿಕೊಂಡಿದ್ದ. ಶನಿವಾರ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಆರೋಪಿ ತೌಫಿಲ್ ಬಂಧನವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರೂ ಆಗಿದ್ದ 36 ವರ್ಷದ ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಬೆಳ್ಳಾರೆ ಪೇಟೆಯಲ್ಲಿ ತಮ್ಮ ಅಂಗಡಿ ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಪ್ರವೀಣ್ ಮೃತಪಟ್ಟಿದ್ದರು.