ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆಗೆ ಎರಡು ಹೊಸ ಟ್ರ್ಯಾಕ್ ಗಳನ್ನು ಸೇರಿಸುವ ಕಾಮಗಾರಿಗೆ ಬಿಡಿಎ ಚಾಲನೆ ನೀಡಿದೆ.. ಕೆಆರ್ಪುರ ಲೂಪ್ ಸೇರುವ ಮುಖ್ಯ ಟ್ರ್ಯಾಕ್ ಬಳಿ ಎರಡು ಸ್ಪ್ಯಾನ್ಗಳನ್ನು ಕಿತ್ತುಹಾಕಿ ನಾಳೆಯಿಂದಲೇ ಕೆಲಸ ಪ್ರಾರಂಭಿಸಲಿದ್ದಾರೆ.ಇದರಿಂದಾಗಿ ಮುಂದಿನ ನಾಲ್ಕು ತಿಂಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿಧಾನಗತಿಯಾಗಲಿದ್ದು ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸಬೇಕೆಂದು ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ..
ಏಪ್ರಿಲ್ 17 ರಿಂದ ನಾಗವಾರ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ಕಡೆಗೆ ಬರುವ ವಾಹನಗಳ ಪೈಕಿ ದ್ವಿ-ಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಹನಗಳಿಗೆ ಕೆ.ಆರ್.ಪುರ ಅಪ್-ರ್ಯಾಂಪ್ನಲ್ಲಿ ನಿಷೇಧಿಸಲಾಗಿದೆ.ನಾಗವಾರ ಔಟರ್ ರಿಂಗ್ ರಸ್ತೆ ಕಡೆಯಿಂದ ನಗರದ ಒಳಗೆ ಮೇಖ್ರಿ ಸರ್ಕಲ್ ಮುಖಾಂತರ ಬರುತ್ತಿದ್ದ ವಾಹನಗಳ ಚಾಲಕರು ಹೆಬ್ಬಾಳ ಸರ್ಕಲ್ನಲ್ಲಿ ಫ್ಲೈ ಓವರ್ ಕೆಳಗಿನಿಂದ ಬಲ ತಿರುವು ಪಡೆದು ಕೊಡಿಗೆಹಳ್ಳಿ ಜಂಕ್ಷನ್ ಬಳಿ ಯೂ ಟರ್ಟ್ ಪಡೆದು ಸರ್ವಿಸ್ ರಸ್ತೆ ಯಿಂದ ಹೆಬ್ಬಾಳ ಫ್ಲೈಒವರ್ನ ರ್ಯಾಂಪ್ ಮುಖೇನ ನಗರದ ಕಡೆಗೆ ಚಲಿಸಬಹುದು.
ಕೆಆರ್ ಪುರ, ನಾಗವಾರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳಿಗೆ ಪರ್ಯಾಯ ಮಾರ್ಗ
ಐಒಸಿ-ಮುಕುಂದ ಥೀಯೇಟರ್ ರಸ್ತೆ.
ಲಿಂಗರಾಜಪುರ ಮೇಲ್ಸೇತುವೆ ಮಾರ್ಗ.
ನಾಗವಾರ ಟ್ಯಾನರಿ ರಸ್ತೆ ಮಾರ್ಗವಾಗಿ ನಗರದೊಳಗೆ ಪ್ರವೇಶಿಸಬೇಕು.
ಹೆಗಡೆನಗರ-ಥಣಿಸಂದ್ರ ಕಡೆಯಿಂದ ಬರುವ ವಾಹನ ಸವಾರರು/ ಚಾಲಕರು ಜಿಕೆವಿಕೆ-ಜಕ್ಕೂರು ರಸ್ತೆ ಮೂಲಕ ನಗರ ಪ್ರವೇಶಿಸಬಹುದಾಗಿದೆ.ಕೆ.ಆರ್.ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಫ್ಲೈಓವರ್ ಕೆಳಗಡೆ ನೇರವಾಗಿ ಬಿಇಎಲ್ ಸರ್ಕಲ್ ತಲುಪಿ ಎಡತಿರುವು ಪಡೆದು ಸದಾಶಿವನಗರ ಜಂಕ್ಷನ್ನಲ್ಲಿ ಬಲತಿರುವು ಪಡೆದು ಐಐಎಸ್ಸಿ ಮುಖಾಂತರ ಚಲಿಸಬಹುದಾಗಿದೆ.ಕೆಆರ್ಪುರಂ, ಹೆಣ್ಣೂರು, ಹೆಚ್.ಆರ್.ಬಿ.ಆರ್ ಲೇಔಟ್, ಕೆಜಿ ಹಳ್ಳಿ, ಬಾಣಸವಾಡಿ ಕಡೆಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಡೆ ಹೋಗುವ ವಾಹನಗಳು ಹೆಣ್ಣೂರು0ಬಾಗನೂರು ರಸ್ತೆಯನ್ನು ಬಳಸಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬಹುದು.