ಸ್ಯಾಂಡಲ್ ವುಡ್ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಇಂದು ಕೊನೆಯುಸಿರೆಳೆದಿದ್ದಾರೆ. ದ್ವಾರಕೀಶ್ ಅವರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ. ರಾಜ್ಕುಮಾರ್, ವಿಷ್ಣುವರ್ಧನ್ ಸೇರಿ ಹಲವು ಕಲಾವಿದರ ಜೊತೆ ದ್ವಾರಕೀಶ್ ನಟಿಸಿ ಖ್ಯಾತಿ ಘಳಿಸಿದ್ದರು. ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ದ್ವಾರಕೀಶ್ ಅವರಿಗೆ ಉತ್ತಮ ಬಾಂಧವ್ಯ ಇತ್ತು. ಆದರೆ, ನಂತರ ಇಬ್ಬರೂ ಬೇರೆ ಆಗುವಂತಾಯಿತು.
1975ರಲ್ಲಿ ರಿಲೀಸ್ ಆದ ‘ಕಳ್ಳ ಕುಳ್ಳ’ ಸಿನಿಮಾದಲ್ಲಿ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಒಟ್ಟಾಗಿ ನಟಿಸಿದರು. ಇವರ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆಯಲು ಈ ಸಿನಿಮಾ ಸಹಕಾರಿ ಆಯಿತು. 1977ರ ‘ಕಿಟ್ಟು ಪುಟ್ಟು’, ‘ಸಿಂಗಾಪುರದಲ್ಲಿ ರಾಜ ಕುಳ್ಳ’, ‘ಗುರು ಶಿಷ್ಯರು’, ‘ಪ್ರಚಂಡ ಕುಳ್ಳ’, ‘ಆಪ್ತಮಿತ್ರರು’ ಸಿನಿಮಾಗಳಲ್ಲಿ ವಿಷ್ಣು, ದ್ವಾರಕೀಶ್ ಒಟ್ಟಾಗಿ ನಟಿಸಿದ್ದರು. ಈ ಪೈಕಿ ಕೆಲವು ಸಿನಿಮಾಗಳನ್ನು ದ್ವಾರಕೀಶ್ ಅವರೇ ನಿರ್ಮಾಣ ಮಾಡಿದ್ದರು.
ದ್ವಾರಕೀಶ್ ಮಾಡಿದ 50 ಚಿತ್ರಗಳಲ್ಲಿ 19 ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ‘ರಾಯರು ಬಂದರು ಮಾವನ ಮನೆಗೆ’ ಸಿನಿಮಾ ಮಾಡಲು ವಿಷ್ಣುವರ್ಧನ್ ಡೇಟ್ಸ್ಗಾಗಿ ನಾಲ್ಕು ವರ್ಷ ಕಾದಿದ್ದರು ದ್ವಾರಕೀಶ್. ರಕ್ತ ಸಂಬಂಧಕ್ಕಿಂತ ದೊಡ್ಡದಾಗಿತ್ತು ಇವರಿಬ್ಬರ ಸಂಬಂಧ. ವಿಷ್ಣುವರ್ಧನ್ ನಿಧನದ ನಂತರ ದ್ವಾರಕೀಶ್ ಸಾಕಷ್ಟು ದುಃಖಕ್ಕೆ ಒಳಗಾಗಿದ್ದರು.
‘ನೀ ತಂದ ಕಾಣಿಕೆ’ ಸಿನಿಮಾ ಬಿಡುಗಡೆ ಆಗಿ ಸೋತಿತ್ತು. ‘ದ್ವಾರಕೀಶ್ ನಂಬಿಕೆಗೆ ಅರ್ಹನಲ್ಲ’ ಎಂದು ವಿಷ್ಣುವರ್ಧನ್ ಹೇಳಿರುವುದಾಗಿ ಪತ್ರಿಕೆಯಲ್ಲಿ ವರದಿ ಆಗಿತ್ತು. ಇದರಿಂದ ದ್ವಾರಕೀಶ್ ಸಿಟ್ಟಾದರು. ಆಗ ಅವರು ದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು ಎಂದು ವೆಂಕಟೇಶ್ ನಾರಾಯಣಸ್ವಾಮಿ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಬರೆದುಕೊಂಡಿದ್ದರು.
‘ಮೊದ ಮೊದಲು, ಅಂಕಲ್ ಅನ್ನುತ್ತಿದ್ದ ನಂತರ ಸರ್ ಎನ್ನುತ್ತಿದ್ದ, ಆ ನಂತರ ಏನೋ ದ್ವಾರ್ಕಿ… ಎಂದು ನನ್ನ ಹೆಗಲ ಮೇಲೆಯೇ ಕೈ ಹಾಕುವಷ್ಟು ಸಲುಗೆ ಬೆಳಸಿಕೊಂಡ. ನಾನೂ ಕೂಡಾ, ಹುಡುಗ ಬೆಳ್ಳಗೆ ಹ್ಯಾಂಡ್ಸಮ್ ಆಗಿದ್ದಾನೆ, ನನ್ನ ಚಿತ್ರಗಳಿಗೆ ಸೂಕ್ತವಾದ ನಾಯಕನಾಗುತ್ತಾನೆ ಎಂದು ಎಲ್ಲವನ್ನೂ ಸಹಿಸಿಕೊಂಡೆ. ಆದರೆ ಆತನ ನಕರಾಗಳು ದಿನೇ ದಿನೇ ನನ್ನ ತಾಳ್ಮೆಯನ್ನು ಪರೀಕ್ಷಿಸುವಂತೆ ಮಾಡುತ್ತಿತ್ತು.. ರಜನಿಕಾಂತ್ ನಂತೆ ನನಗೂ ಒಂದು ತಮಿಳು ಚಿತ್ರವನ್ನು ಮಾಡು ಎಂದು ಪೀಡಿಸುತ್ತಾನೆ. ರಜನೀಕಾಂತ್ ಎಲ್ಲಿ ಇವನೆಲ್ಲಿ. ಇವನಿಗಾಗಿ ನಾನು ಎಷ್ಟೆಲ್ಲಾ ಮಾಡಿದ್ದೇನೆ. ಸ್ವಲ್ಪವೂ ಕೃತಜ್ಞತೆ ಇಲ್ಲ’ ಎಂದು ದ್ವಾರಕೀಶ್ ಹೇಳಿದ್ದರು.
‘ನಾನು ರಜನೀಕಾಂತ್ ಶ್ರೀದೇವಿ ಯಂತಹ ಸ್ಟಾರ್ ಕಲಾವಿದರನ್ನು ಹಾಕಿಕೊಂಡು ಹಿಂದಿ, ತಮಿಳು ಸಿನಿಮಾಗಳನ್ನು ಮಾಡಿದ ಪ್ರೊಡ್ಯೂಸರ್. ಇವನಿಲ್ಲದೆಯೂ ನಾನು ಸಿನಿಮಾ ಮಾಡಿ ಗೆಲ್ಲ ಬಲ್ಲೆ. ಆದರೆ ನನ್ನಂತಹ ನಿರ್ಮಾಪಕನನ್ನು ಎದುರು ಹಾಕಿಕೊಂಡು ಇವನು ಇಂಡಸ್ಟ್ರಿಯಲ್ಲಿ ಹೇಗೆ ನಿಲ್ಲುತ್ತಾನೋ ನೋಡೋಣ. ಅವನು ನನಗೆ ಮಾಡಿದ ದ್ರೋಹವನ್ನೇ ಕಥಾವಸ್ತುವನ್ನಾಗಿ ಇಟ್ಟುಕೊಂಡು ಸ್ಕ್ರಿಪ್ಟ್ ಮಾಡಿಸುತ್ತಿದ್ದೇನೆ ಸ್ಕ್ರಿಪ್ಟ್ ರೈಟರ್ ಕ್ಲೈಮ್ಯಾಕ್ಸ್ ನಲ್ಲಿ ಬೆನ್ನಿಗೆ ಚೂರಿ ಹಾಕುವಂತೆ ಮಾಡಿದ್ದಾರೆ. ಇಲ್ಲ, ನೇರವಾಗಿ ಎದೆಗೇ ಚುಚ್ಚುವಂತೆ ಬದಲಾಯಿಸುತ್ತಿದ್ದೇನೆ. ಚಿತ್ರಕಥೆ ಫೈನಲ್ ಆದ ನಂತರ ಕಲಾವಿದರು ಮತ್ತು ತಾಂತ್ರಿಕ ವರ್ಗದ ಪಟ್ಟಿಯನ್ನು ಬಿಡುಗಡೆ ಮಾಡುತ್ತೇನೆ’ ಎಂದು ದ್ವಾರಕೀಶ್ ಹೇಳಿದ್ದರು. ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದರು.
ವಿಷ್ಣುವರ್ಧನ್ ಇಲ್ಲದೆ ಬೇರೆ ಬೇರೆ ಹೀರೋಗಳ ಜೊತೆ ದ್ವಾರಕೀಶ್ ಅವರು ನಿರ್ಮಿಸಿ/ನಿರ್ದೇಶಿಸಿದರು ಸಿನಿಮಾ ಒಂದರ ಹಿಂದೊಂದರಂತೆ ಸತತವಾಗಿ 18 ಫ್ಲಾಪ್ ಆಯಿತು. ಅವರು ವೃತ್ತಿಬದುಕಿನಲ್ಲಿ ಸೋತು ಸುಣ್ಣವಾಗುವಂತೆ ಮಾಡಿತ್ತು. ‘ಆಪ್ತಮಿತ್ರ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿ ಸಿನಿಮಾ ಸೂಪರ್ ಹಿಟ್ ಆಯಿತು. ಆದರೂ ಅವರ ಗೆಳೆತನ ಸಂಪೂರ್ಣವಾಗಿ ಸರಿ ಆಗಿರಲಿಲ್ಲ ಎಂಬ ಸುದ್ದಿ ಕೇಳಿ ಬಂದಿತ್ತು.