ಬೆಂಗಳೂರು : ಮಾನ್ಯ ಹೆಚ್ʼಡಿ ದೇವೇಗೌಡರೇ ಈ ಇಳಿವಯಸ್ಸಿನಲ್ಲಿ ಈ ಬಗೆಯ ಶರಣಾಗತಿಯ ಸ್ಥಿತಿ ಯಾಕೆ ಬಂತು? ನಮ್ಮದು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ. ಇಲ್ಲಿ ಪ್ರಧಾನ ಮಂತ್ರಿ ಏಕಚಕ್ರಾಧಿಪತಿಯೂ ಅಲ್ಲ, ಮುಖ್ಯಮಂತ್ರಿ ಮಾಂಡಲೀಕನೂ ಅಲ್ಲ. ಈಗಲೂ ಕಾಲ ಮಿಂಚಿಲ್ಲ, ನಿಮ್ಮ ತಪ್ಪನ್ನು ತಿದ್ದಿಕೊಂಡು ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಸನ್ಮಾನ್ಯ ಎಚ್ಡಿ ದೇವೇಗೌಡರೇ, ನೂರು ಕೋಟಿ ಜನರ ಪ್ರತಿನಿಧಿಯಾಗಿರುವ ಪ್ರಧಾನ ಮಂತ್ರಿಯವರನ್ನು ಆರು ಕೋಟಿ ಜನರ ಪ್ರತಿನಿಧಿಯಾದ ಮುಖ್ಯಮಂತ್ರಿ ಪ್ರಶ್ನೆ ಮಾಡಬಾರದು ಎಂಬ ನಿಮ್ಮ ಮಾತು ನನ್ನಲ್ಲಿ ಅತ್ಯಾಶ್ಚರ್ಯವನ್ನು ಮಾತ್ರವಲ್ಲ, ನಿಮ್ಮ ಬಗ್ಗೆ ಕನಿಕರವನ್ನೂ ಉಂಟು ಮಾಡಿದೆ. ಒಂದು ಪ್ರಾದೇಶಿಕ ಪಕ್ಷವನ್ನು ಇಷ್ಟು ವರ್ಷಗಳ ಕಾಲ ಮುನ್ನಡೆಸುತ್ತಾ ಬಂದ ನೀವು ನಿರಂತರವಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿಯವರನ್ನು ಟೀಕಿಸುತ್ತಾ ಬಂದವರು. ಇದೀಗ ಈ ಇಳಿವಯಸ್ಸಿನಲ್ಲಿ ಈ ಬಗೆಯ ಶರಣಾಗತಿಯ ಸ್ಥಿತಿ ಯಾಕೆ ಬಂತು? ಎಂದು ಕೇಳಿದ್ದಾರೆ.
ಮಾನ್ಯ ದೇವೇಗೌಡರೇ, ನಮ್ಮದು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ. ಇಲ್ಲಿ ಪ್ರಧಾನ ಮಂತ್ರಿ ಏಕಚಕ್ರಾಧಿಪತಿಯೂ ಅಲ್ಲ, ಮುಖ್ಯಮಂತ್ರಿ ಮಾಂಡಲೀಕನೂ ಅಲ್ಲ. ಇಬ್ಬರು ಅವರವರ ಸ್ಥಾನಮಾನದಲ್ಲಿ ಸಮಾನರು. ಎರಡೂ ಪದವಿಗಳು ಸಮಾನವಾದುದು, ವಯಸ್ಸಿನ ಹಿರಿ-ಕಿರಿತನಗಳು ಪದವಿಗಳಿಗೆ ಅನ್ವಯವಾಗುವುದಿಲ್ಲ. ಅತಿ ಸಣ್ಣ ವಯಸ್ಸಿಗೆ ಪ್ರಧಾನಿಯಾದ ರಾಜೀವ್ ಗಾಂಧಿಯವರಿದ್ದಾಗಲೂ ಅವರಿಗಿಂತ ಹಿರಿಯರಾದ ಮುಖ್ಯಮಂತ್ರಿಗಳೂ ಇದ್ದರು. ಆಗಲೂ ಪರಸ್ಪರ ಟೀಕೆ-ಟಿಪ್ಪಣಿಗಳು ವಿನಿಮಯವಾಗುತ್ತಿದ್ದವು. ಇಲ್ಲಿಯ ವರೆಗೆ ಯಾರೂ ಕೂಡಾ ನಿಮ್ಮ ರೀತಿಯ ಉಪದ್ವಾಪ್ಯತನದ ಪ್ರಶ್ನೆಗಳನ್ನು ಎತ್ತಿರಲಿಲ್ಲ ಎಂದಿದ್ದಾರೆ.
ದೇವೇಗೌಡರೇ, ನೀವು ಹಿಂದಿನ ಪ್ರಧಾನಿಗಳನ್ನು ಯಾವ ಯಾವ ರೀತಿಯಲ್ಲಿ ಪ್ರಶ್ನಿಸಿದ್ದೀರಿ, ದೂರಿದ್ದೀರಿ, ಕೆಣಕಿದ್ದೀರಿ ಎನ್ನುವ ಪಟ್ಟಿಯನ್ನು ನಾನು ನಿಮಗೆ ಕೊಡಬಲ್ಲೆ. 2002ರ ಗುಜರಾತ್ ಗಲಭೆಯ ಬಗ್ಗೆ ಲೋಕಸಭೆಯಲ್ಲಿ ನಡುರಾತ್ರಿ ವರೆಗೆ ನಡೆದ ಚರ್ಚೆಯಲ್ಲಿ ನೀವು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ಧ ಪ್ರಯೋಗ ಮಾಡಿರುವ ಟೀಕಾಸ್ತ್ರಗಳು ಸದನದ ದಾಖಲೆಯಲ್ಲಿರಬಹುದು. ಇದನ್ನು ಈಗಲೂ ನಾನು ತಪ್ಪೆಂದು ಹೇಳುವುದಿಲ್ಲ. ಇವೆಲ್ಲವೂ ಸಂಸದೀಯ ಪ್ರಜಾಪ್ರಭುತ್ವದ ನಡವಳಿಕೆಗಳ ಭಾಗವಾಗಿರುತ್ತದೆ. ಆಗ ನೀವು ಮುಖ್ಯಮಂತ್ರಿಯೂ ಆಗಿರಲಿಲ್ಲ, ನೀವು ಕೇವಲ ಒಂದು ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿದ್ದವರು. ಆಗ ಈ ನೂರು ಕೋಟಿ, ಆರು ಕೋಟಿ ವ್ಯತ್ಯಾಸಗಳು ಬಾಧಿಸಿರಲಿಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.