ಅಗಲಿದ ಹಿರಿಯ ನಟ ದ್ವಾರಕೀಶ್ ಅವರಿಗೆ ಇಬ್ಬರು ಪತ್ನಿಯರು. ಇದನ್ನು ಸ್ವತಃ ನಟ ದ್ವಾರಕೀಶ್ ಬಹಿರಂಗ ಪಡಿಸಿದ್ದರು. ಮೊದಲು ಕೈ ಹಿಡಿದಿದ್ದು ಅಂಬುಜಾ ಅವರನ್ನು ಬಳಿಕ ಮದುವೆಯಾಗಿದ್ದು ಶೈಲಜಾ ಅವರನ್ನು.
ಎರಡನೇ ಮದುವೆ ಆದಾಗ ದ್ವಾರಕೀಶ್ ಅವರಿಗೆ 51 ವರ್ಷ. ಈ ಸಮಯದಲ್ಲಿ ದ್ವಾರಕೀಶ್ ಗೌರಿ ಕಲ್ಯಾಣ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಇವರದ್ದೇ ಬ್ಯಾನರ್ ನಲ್ಲಿ ಮೂಡಿ ಬಂದಿದ್ದ ಶ್ರುತಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ ಎಂದಾಗ, ಆ ಸಿನಿಮಾದಲ್ಲಿ ತನ್ನ ತಂಗಿಗೆ ಅವಕಾಶ ಕೇಳಲು ಬಂದವರು ಈ ಶೈಲಜಾ. ಈ ಭೇಟಿಯೇ ಮುಂದೆ ಪ್ರೀತಿಯಾಗಿ, ಮದುವೆಯೂ ಆಯಿತು.
ಪ್ರತಿಷ್ಠಿಯ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಶೈಲಜಾ, ತಂಗಿಗಾಗಿ ಪಾತ್ರ ಕೇಳಲು ಬಂದವರು ಬಳಿಕ ದ್ವಾರಕೀಶ್ ಪ್ರೀತಿಗೆ ಮನಸೋತು ಎರಡನೇ ಮದುವೆ ಅಂತ ಗೊತ್ತಿದ್ದರೂ ಗ್ರೀನ್ ಸಿಗ್ನಲ್ ನೀಡಿದರು.
ಶೈಲಜಾ ಹಾಗೂ ದ್ವಾರಕೀಶ್ ಇಷ್ಟ ಪಡುತ್ತಿರುವ ಮತ್ತು ದ್ವಾರಕೀಶ್ ಮತ್ತೊಂದು ಮದುವೆ ಆಗುವ ವಿಚಾರವನ್ನು ಮೊದಲ ಪತ್ನಿಗೆ ತಿಳಿಸೋದು ಹೇಗೆ ಎನ್ನುವ ಒದ್ದಾಟ ಇಬ್ಬರದ್ದೂ ಆಗಿತ್ತು. ಆಗಲೇ ದ್ವಾರಕೀಶ್ ಅವರಿಗೆ ಐದು ಮಕ್ಕಳು. ಅಳುಕಿನಿಂದಲೇ ಮೊದಲ ಪತ್ನಿಗೆ ವಿಷಯ ತಿಳಿಸಿದ್ದರು ದ್ವಾರಕೀಶ್. ಆಗ ಮೊದಲ ಪತ್ನಿ ಅಂಬುಜಾ ನಿನಗೇನಿಷ್ಟನೋ ಅದು ನನಗಿಷ್ಟ ದ್ವಾರ್ಕಿ ಎಂದರು. ಬಳಿಕ ಪತ್ನಿ ಮತ್ತು ಮಕ್ಕಳ ಎದುರೇ ಎರಡನೇ ಮದುವೆ ಆದರು.