ಸ್ಯಾಂಡಲ್ ವುಡ್ ನ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ತಮ್ಮ 81 ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ದ್ವಾರಕೀಶ್ ಜೊತೆ ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ಕಲಾವಿದರು ಕೆಲಸ ಮಾಡಿದ್ದರು. ಅವರು ನಿರ್ಮಾಣ ಮಾಡಿದ್ದ ‘ಆಪ್ತಮಿತ್ರ’ ಚಿತ್ರದಲ್ಲಿ ರಮೇಶ್ ಅರವಿಂದ್ ನಟಿಸಿದ್ದರು. ದ್ವಾರಕೀಶ್ ಅವರ ಅಗಲಿಕೆಯ ವಿಷಯ ತಿಳಿದು ರಮೇಶ್ ಮರುಗಿದ್ದಾರೆ. ದ್ವಾರಕೀಶ್ ಅವರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ರಮೇಶ್ ಅರವಿಂದ್ ಮೆಲುಕು ಹಾಕಿದ್ದಾರೆ.
‘ನಾವೆಲ್ಲ ವಿದ್ಯಾರ್ಥಿಗಳಾಗಿದ್ದಾಗ ‘ಕಳ್ಳ ಕುಳ್ಳ’, ‘ಸಿಂಗಾಪುರದಲ್ಲಿ ರಾಜಾ ಕುಳ್ಳ’, ‘ಕಿಟ್ಟು ಪುಟ್ಟು’ ಮುಂತಾದ ಸಿನಿಮಾಗಳನ್ನು ನೋಡಿ ಬಹಳ ಇಷ್ಟ ಆಗಿತ್ತು. ದ್ವಾರಕೀಶ್ ಅವರ ಮನೆ ನಮ್ಮ ಮನೆ ಬಳಿಯೇ ಇತ್ತು. ಎನ್.ಆರ್. ಕಾಲೋನಿಯಲ್ಲಿ ಇರುವ ಅವರ ಮನೆಯ ಸುತ್ತ ನಾವು ಸೈಕಲ್ನಲ್ಲಿ ರೌಂಡ್ ಹೊಡೆಯುತ್ತಿದ್ದೆವು. ಇದೇ ದ್ವಾರಕೀಶ್ ಅವರ ಮನೆ ಎಂದು ಹೇಳಿಕೊಂಡು ಹೋಗುತ್ತಿದ್ದೆವು. ಕೆಲವು ವರ್ಷಗಳ ನಂತರ, ನಾವು ಕಾಲೇಜಿಗೆ ಬಂದಾಗ ಆ ಮನೆಯನ್ನು ದ್ವಾರಕೀಶ್ ಸರ್ ಮಾರಿಬಿಟ್ಟಿದ್ದರು ಅಂತ ಕೇಳಿದೆವು. ನಮಗೆ ಆಗ ಅಯ್ಯೋ ಎನಿಸಿತು’ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
‘ಚಿತ್ರರಂಗದಲ್ಲಿ ದ್ವಾರಕೀಶ್ ಅವರು ನೋಡಿದಂತಹ ಏರು-ಪೇರು, ಸೋಲು-ಗೆಲುವು ದೊಡ್ಡದು. ಎಲ್ಲವನ್ನೂ ದಾಟಿಕೊಂಡು ಅವರು ನಿಂತ ರೀತಿ ಬಹಳ ವಿಶೇಷ. ನಮ್ಮ ಚಿತ್ರರಂಗಕ್ಕೆ ಎಂಥೆಂಥಾ ಸಿನಿಮಾಗಳನ್ನು ನೀಡಿದ್ದಾರೆ. ಸೋಲನ್ನು ನೋಡಿದ ಬಳಿಕ ‘ಆಪ್ತ ಮಿತ್ರ’ ರೀತಿಯ ಅದ್ಭುತ ಸಿನಿಮಾವನ್ನು ನೀಡುತ್ತಾರೆ. ಅದು ನಿಜವಾದ ದ್ವಾರಕೀಶ್. ಅವರಿಗೆ ಇದ್ದಂತಹ ಆತ್ಮವಿಶ್ವಾಸ ಅಂಥದ್ದು’ ಎಂದಿದ್ದಾರೆ ರಮೇಶ್ ಅರವಿಂದ್.
‘ನಾವು ಆಪ್ತಮಿತ್ರ ಸಿನಿಮಾ ಮಾಡುವಾಗ ದ್ವಾರಕೀಶ್ ಅವರು ಸೆಟ್ಗೆ ಬಂದರೆ ಒಂದು ಜಾಲಿ ವಾತಾವರಣ ಸೃಷ್ಟಿ ಮಾಡುತ್ತಿದ್ದರು. ಎಲ್ಲರ ಜೊತೆ ಬೆರೆಯುವ ರೀತಿ, ಅವರ ಸಮಸ್ಯೆಗಳ ಬಗ್ಗೆ ಅವರೇ ಜೋಕ್ ಮಾಡುತ್ತಿದ್ದ ಜಾಲಿ ವ್ಯಕ್ತಿ ಅವರಾಗಿದ್ದರು. ಒಂದು ಕಡೆ ಬಿಸ್ನೆಸ್ ಮೈಂಡ್, ಇನ್ನೊಂದು ಕಡೆ ಸಿನಿಮಾ ಬಗ್ಗೆ ಅಪಾರವಾದ ಪ್ರೀತಿ. ಇದೆಲ್ಲ ಸೇರಿ ದ್ವಾರಕೀಶ್ ಚಿತ್ರ ಎಂಬ ದೊಡ್ಡ ಸಂಸ್ಥೆ ಮಾಡಿದ್ದರು. 50 ಸಿನಿಮಾಗಳನ್ನು ನಿರ್ಮಾಣ ಮಾಡುವುದು ಎಂದರೆ ಸುಲಭವಲ್ಲ. ಎಂಥಾ ದೊಡ್ಡ ಸಾಧನೆ ಅಂತ ಕಲ್ಪನೆ ಮಾಡಿಕೊಳ್ಳಿ’ ಎಂದು ರಮೇಶ್ ಅರವಿಂದ್ ದ್ವಾರಕೀಶ್ ಬಗ್ಗೆ ಮಾತನಾಡಿದ್ದಾರೆ.