ಆನೇಕಲ್: ಆಕೆಗೆ ಸಿಜೇರಿಯನ್ ಆಪರೇಷನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಮುದ್ದಾದ ಹೆಣ್ಣು ಜನ್ಮ ನೀಡಿದ್ದ ಆಕೆಯ ಕುಟುಂಬ ಸಂತಸಪಟ್ಟಿತ್ತು. ಆದ್ರೆ ಆ ಸಂತಸ ಹೆಚ್ಚು ಹೊತ್ತು ಇರಲಿಲ್ಲ. ವೈದ್ಯರ ನಿರ್ಲಕ್ಷ್ಯ ಆರೋಪ ಆಕೆ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅಷ್ಟಕ್ಕೂ ಬಾಣಂತಿ ತಾಯಿಗೆ ಏನಾಯ್ತು ಅಂತೀರಾ….? ಈ ಸ್ಟೋರಿ ನೋಡಿ….
ಹೀಗೆ ಬಾಣಂತಿ ಮಹಿಳೆ ಸಾವಿಗೆ ದುಃಖಿಸುತ್ತಿರುವ ಪೋಷಕರು. ನಿರ್ಲಕ್ಷ್ಯ ತೋರಿದ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿರುವ ಸಂಬಂಧಿಕರು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಅಮ್ಮ ಆಸ್ಪತ್ರೆ ಬಳಿ. ಕಳೆದ ಮೂರು ದಿನಗಳ ಹಿಂದೆ ಹೆರಿಗೆಗೆಂದು ಅಮ್ಮ ಆಸ್ಪತ್ರೆಗೆ ದಾಖಲಾಗಿದ್ದ ಕವಿತಾ ಎಂಬ ಮಹಿಳೆ ಸಾವನ್ನಪ್ಪಿದ್ದು, ಅಮ್ಮ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಆಕೆಯ ಕುಟುಂಬದವರು ಅಮ್ಮ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೆರಿಗೆ ವೇಳೆ ವೈದ್ಯರು ಯಡವಟ್ಟು ಮಾಡಿದ್ದಾರೆ. ಅದನ್ನು ಮುಚ್ಚಿ ಹಾಕಲು ಕುಟುಂಬದವರ ಅನುಮತಿ ಪಡೆಯದೇ ಎರಡನೇ ಬಾರಿ ಸರ್ಜರಿ ಮಾಡಿದ್ದಾರೆ. ಪರಿಸ್ಥಿತಿ ಹದಗೆಡುತ್ತಿದ್ದಂತೆ ಬೇರೊಂದು ಆಸ್ಪತ್ರೆಗೆ ರವಾನಿಸಿ ಕೈ ತೊಳೆದುಕೊಂಡಿದ್ದಾರೆಂದು ಮೃತ ಮಹಿಳೆ ಕುಟುಂಬದವರು ಆರೋಪಿಸಿದ್ದಾರೆ.
ಇನ್ನೂ ಮೃತ ಬಾಣಂತಿಗೆ ಅಗತ್ಯ ವೈದ್ಯಕೀಯ ಸೇವೆ ಒದಗಿಸಲಾಗಿದೆ. ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಯಾವುದೇ ರೀತಿಯ ನಿರ್ಲಕ್ಷ್ಯ ತೋರಿಲ್ಲ. ಸಿಜೇರಿಯನ್ ಸಂದರ್ಭದಲ್ಲಿ ರಕ್ತಸ್ರಾವ ಸಾಮಾನ್ಯವಾಗಿ ಆಗುತ್ತದೆ. ಆದ್ರೆ ರಕ್ತಸ್ರಾವ ನಿಲ್ಲಿಸುವ ಸಲುವಾಗಿ ಕೂಡಲೇ ಎರಡನೇ ಬಾರಿ ಸರ್ಜರಿ ಮಾಡಲಾಗಿದೆ. ಆದ್ರೆ ರಕ್ತದೊತ್ತಡದಲ್ಲಿ ಏರುಪೇರು ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದ್ದು, ಪ್ರಾಥಮಿಕವಾಗಿ ಹೃದಯ ಸಂಬಂಧಿ ಸಮಸ್ಯೆಯಾದ ಯಿಂದ ರೋಗಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ನಮ್ಮ ಆಸ್ಪತ್ರೆಯಲಿನ ಚಿಕಿತ್ಸೆಯಲ್ಲಿ ಯಾವುದೇ ಯಡವಟ್ಟು ನಿರ್ಲಕ್ಷ್ಯ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಒಟ್ನಲ್ಲಿ ಅಪರೂಪದ ಹೃದಯ ಸಂಬಂಧಿ ಸಮಸ್ಯೆಯೋ ಅಥವಾ ವೈದ್ಯರ ಯಡವಟ್ಟೋ ಗೊತ್ತಿಲ್ಲ. ಆದ್ರೆ ಬಾಳಿ ಬದುಕಬೇಕಿದ್ದ ತಾಯಿ ಬಾರದ ಲೋಕಕ್ಕೆ ಪಯಣಿಸಿದ್ದಾಳೆ. ಆದ್ರೆ ಹಾಲುಗಲ್ಲದ ಕಂದಮ್ಮ ಮಾತ್ರ ತನ್ನದಲ್ಲದ ತಪ್ಪಿಗೆ ಅನಾಥಳಾಗಿರುವುದು ಮಾತ್ರ ದುರಂತವೇ ಸರಿ….