ಗಾಂಧಿನಗರ: ಗುಜರಾತ್ನ ಶ್ರೀಮಂತ ಉದ್ಯಮಿಯೊಬ್ಬರು ತಮ್ಮ 200 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ದಾನ ಮಾಡುವ ಮೂಲಕ ಪತ್ನಿಯೊಂದಿಗೆ ಸನ್ಯಾಸತ್ವದ ದಾರಿ ಹಿಡಿದಿದ್ದಾರೆ. ಸಬರ್ಕಾಂತ ಜಿಲ್ಲೆಯ ಹಿಮ್ಮತ್ನಗರದ ಉದ್ಯಮಿ ಭವೇಶ್ ಭಾಯ್ ಭಂಡಾರಿ ಮತ್ತು ಅವರ ಪತ್ನಿ ಜೈನ ದೀಕ್ಷೆ ತೆಗೆದುಕೊಂಡು ಸನ್ಯಾಸಿಯಾಗಲು ಮುಂದಾಗಿದ್ದಾರೆ.
ಸನ್ಯಾಸತ್ವ ಸ್ವೀಕಾರ ಹಿನ್ನೆಲೆ ಫೆಬ್ರವರಿಯಲ್ಲಿ ತಮ್ಮ 200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿದ್ದು, ಈ ತಿಂಗಳ ಕೊನೆಯಲ್ಲಿ ಅಧಿಕೃತವಾಗಿ ಸನ್ಯಾಸತ್ವ ಸ್ವೀಕರಿಸಲಿದ್ದಾರೆ. ಭವೇಶ್ ದಂಪತಿಯ ಮಕ್ಕಳು ಸಹ 2 ವರ್ಷಗಳ ಹಿಂದೆ ದೀಕ್ಷೆ ಪಡೆದಿದ್ದರು
ಏಪ್ರಿಲ್ 22ರಂದು ಭವೇಶ್ ದಂಪತಿ ಸನ್ಯಾಸತ್ವ ತೆಗೆದುಕೊಳ್ಳಲಿದ್ದು, ಬಳಿಕ ಲೌಕಿಕ ಜೀವನವನ್ನು ತ್ಯಜಿಸಲಿದ್ದಾರೆ. ಜೈನ ಸಮಾಜದಲ್ಲಿ ದೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ದೀಕ್ಷೆ ತೆಗೆದುಕೊಳ್ಳುವವರು ಭಿಕ್ಷೆ ಬೇಡುವ ಮೂಲಕ ಜೀವನ ಸಾಗಿಸಬೇಕು. ಐಷಾರಾಮಿ ಜೀವನವನ್ನು ತ್ಯಜಿಸಬೇಕು. ಅಷ್ಟೇ ಅಲ್ಲದೇ ಜೀವನ ಪರ್ಯಂತ ಬರಿಗಾಲಿನಲ್ಲಿ ಇಡೀ ಭಾರತದಾದ್ಯಂತ ತಿರುಗಾಡಬೇಕಾಗುತ್ತದೆ.
ಹುಟ್ಟಿನಿಂದಲೇ ಶ್ರೀಮಂತ ಮನೆತನದಲ್ಲಿ ಬೆಳೆದ ಭವೇಶ್ ಭಂಡಾರಿ ಅವರ ಸನ್ಯಾಸತ್ವದ ನಿರ್ಧಾರ ಎಲ್ಲರ ಗಮನಸೆಳೆದಿದ್ದು, ಎಲ್ಲೆಡೆ ವೈರಲ್ ಆಗಿದೆ. ಅಲ್ಲದೇ ಭವೇಶ್ ದಂಪತಿ ಇತರೆ 35 ಮಂದಿಯೊಂದಿಗೆ ಸುಮಾರು 4 ಕಿ.ಮೀ ಮೆರವಣಿಗೆ ತೆರಳಿ ಬಳಿಕ ತಮ್ಮಲ್ಲಿದ್ದ ಮೊಬೈಲ್ ಸೇರಿದಂತೆ ಸಮಸ್ತ ಆಸ್ತಿಯನ್ನು ದಾನ ಮಾಡಿದ್ದಾರೆ.