ಕನ್ನಡಕ್ಕೆ ಮತ್ತು ಕನ್ನಡ ಸಿನಿಮಾ ರಂಗಕ್ಕೆ ದ್ವಾರಕೀಶ್ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದ್ವಾರಕೀಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ದ್ವಾರಕೀಶ್ ಬಹಳಷ್ಟು ಏಳುಬೀಳುಗಳನ್ನ ಕಂಡಿದ್ದರು. ಎಷ್ಟೇ ಕಷ್ಟಬಂದರು ಸಹಿಸಿಕೊಂಡು ಕನ್ನಡಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಹೆಚ್ಚಾಗಿ ಅವರು ಸಹ ಮೈಸೂರಿನವರು. ಅನೇಕ ವಿಚಾರಗಳನ್ನ ಅವರೊಂದಿಗೆ ಚರ್ಚೆ ಮಾಡಿದ್ದೆ. ಕನ್ನಡ ಸೇವೆ ಮಾಡಿದ ಅಪರೂಪ ನಟ. ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ದೃಷ್ಟಿ ಕೊಡುವಂತವ ಕೆಲಸ ಮಾಡಿರೋದು ಶ್ಲಾಘನೀಯ. ಕನ್ನಡ ಚಿತ್ರರಂಗ ಅವರ ಸಾವಿನಿಂದ ಬಹಳ ಬಡವಾಯಿತು. ಒಬ್ಬ ಕನ್ನಡ ಪ್ರೇಮಿ ಕಳೆದುಕೊಂಡಿದ್ದೇವೆ. ಅವರ ಧರ್ಮಪತ್ನಿ ಕಾಲವಾದ ದಿನವೇ ಅವರು ಕಾಲವಾಗಿದ್ದಾರೆ ಎಂದು ಹೇಳಿದರು.
ದ್ವಾರಕೀಶ್ ಅವರ ಚಿತೆಗೆ ಅಗ್ನಿಸ್ಪರ್ಷ ಮಾಡುವ ಮುನ್ನ ಪೊಲೀಸ್ ಇಲಾಖೆಯು ಪೊಲೀಸ್ ಗೌರವವನ್ನು ಸಲ್ಲಿಸಲಾಯಿತು. ನಂತರ ಬ್ರಾಹ್ಮಣ ವಿಧಿವಿಧಾನದ ಪ್ರಕಾರ ಮೊದಲಿಗೆ ಪ್ರೇತ ಸಂಸ್ಕಾರ. ಆನಂತರ ಕಿವಿಯಲ್ಲಿ ನಾರಾಯಣ ಸ್ಮರಣೆ. ಚಿತಾ ಅಗ್ನಿ ಹೋಮದ ನಂತರ ಚಿತಾ ಶುದ್ಧಿ , ಭೂ ಸ್ಪರ್ಶ ದಹನ ಮಾಡಿ, ಆಮೇಲೆ ಅಗ್ನಿ ದಿಗ್ಬಂಧನ ಮಾಡಲಾಯಿತು.
ನಿನ್ನೆ ಬೆಳಗ್ಗೆ ದ್ವಾರಕೀಶ್ ಅವರು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದರು. ನಿನ್ನೆಯಿಂದ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕನ್ನಡ ಚಿತ್ರೋದ್ಯಮದ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದರು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ದ್ವಾರಕೀಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.