ಬ್ಯಾಂಕ್ನಲ್ಲಿ ಸಾಲ ಪಡೆಯುವ ಸಲುವಾಗಿ ಮಹಿಳೆಯೊಬ್ಬಳು ಸತ್ತ ವ್ಯಕ್ತಿಯನ್ನು ವ್ಹೀಲ್ಚೇರ್ ಮೇಲೆ ಕೂರಿಸಿಕೊಂಡು ಬ್ಯಾಂಕ್ ಆಗಮಿಸಿ ಸಿಕ್ಕಿಬಿದ್ದಿದ್ದಾಳೆ. ವ್ಯಕ್ತಿ ಇನ್ನೂ ಬದುಕಿದ್ದಾನೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಬಿಂಬಿಸಲು ಹೋಗಿ ಮಹಿಳೆ ಸಿಕ್ಕಿ ಬಿದ್ದಿರುವ ಘಟನೆ ಬ್ರೆಜಿಲ್ನ ರಿಯೋ ಡಿ ಜನೈರೊದಲ್ಲಿ ನಡೆದಿದೆ.
ಬ್ಯಾಂಕ್ನಲ್ಲಿದ್ದ ವ್ಯಕ್ತಿಯೊಬ್ಬರು ವ್ಹೀಲ್ಚೇರ್ ಮೇಲೆ ಕುಳಿತಿದ್ದ ವ್ಯಕ್ತಿಯ ಕಳೆಗುಂದಿದ ಮುಖ ಮತ್ತು ಮಹಿಳೆಯ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿ, ತುರ್ತು ಸೇವೆ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿ, ಆಕೆಯ ಚಲನಾವಲನವನ್ನು ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸಿದರು.
ಮಹಿಳೆಯು ಮೃತ ವ್ಯಕ್ತಿಯ ತಲೆಯನ್ನು ಹಿಡಿದುಕೊಂಡು ಕಾಗದದ ಮೇಲೆ ಸಹಿ ಹಾಕುವಂತೆ ಒತ್ತಾಯಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಸತ್ತ ವ್ಯಕ್ತಿ ಸಹಿ ಹಾಕುವುದು ಅಸಾಧ್ಯ ಎಂಬುದು ಗೊತ್ತಿದ್ದರೂ ಸಹಿಯನ್ನು ಪಡೆಯುವ ತನ್ನ ವ್ಯರ್ಥ ಪ್ರಯತ್ನದಲ್ಲಿ ಮೃತನ ಬೆರಳುಗಳ ನಡುವೆ ಪೆನ್ನನ್ನು ಸಹ ಇರಿಸುತ್ತಾಳೆ. ಮಹಿಳೆಯ ವರ್ತನೆ ನೋಡಿ, ಅನುಮಾನ ಜಾಸ್ತಿಯಾಗುತ್ತಿದ್ದಂತೆ ವ್ಹೀಲ್ಚೇರ್ ಮೇಲೆ ಕುಳಿತಿರುವ ವ್ಯಕ್ತಿಯ ಯೋಗಕ್ಷೇಮದ ಬಗ್ಗೆ ಬ್ಯಾಂಕ್ ಉದ್ಯೋಗಿಯೊಬ್ಬಳು ಕೇಳಿದ್ದಾರೆ. ಈ ವೇಳೆ ಏನು ಆಗಿಲ್ಲ ಎಂಬಂತೆ ನಟಿಸಿದ ಮಹಿಳೆ, ಸತ್ತ ವ್ಯಕ್ತಿಯನ್ನು ತನ್ನೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾಳೆ.
ಈ ವೇಳೆ ಸ್ಥಳಕ್ಕೆ ಬಂದ ವೈದ್ಯರು ವ್ಯಕ್ತಿಯನ್ನು ಪರೀಕ್ಷಿಸಿ ಆತ ಸ್ವಲ್ಪ ಸಮಯದ ಮುಂಚೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತನನ್ನು ಪೌಲೋ ರಾಬರ್ಟೋ ಬ್ರಾಗಾ (68) ಎಂದು ಗುರುತಿಸಲಾಗಿದೆ. ಆತನನ್ನು ಬ್ಯಾಂಕ್ಗೆ ಕರೆದುಕೊಂಡ ಬಂದ ಮಹಿಳೆಯ ಹೆಸರು ಎರಿಕಾ ಡಿಸೋಜಾ ವೇರಿ ನನ್ಸ್. ತಾನು ಮೃತ ವ್ಯಕ್ತಿಯ ಸೊಸೆ. ನಾನೇ ಆತನನ್ನು ಆರೈಕೆ ಮಾಡುತ್ತಿದ್ದೆ ಎಂದು ಹೇಳಿದ್ದಾಳೆ.
ಸದ್ಯ ಅಧಿಕಾರಿಗಳು ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮಹಿಳೆಗೆ ಯಾರಾದರೂ ಸಹಚರರು ಇದ್ದಾರೆಯೇ? ಎಂದು ಬ್ಯಾಂಕ್ ನ ಸುತ್ತ ಮುತ್ತ ಇದ್ದ ಸಿಸಿಟಿವಿ ವಿಡಿಯೋಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.