ತಮಿಳು ಹಾಗೂ ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಸ್ನೇಹಾ ಕನ್ನಡಿಗರಿಗೂ ಚಿರ ಪರಿಚಿತ. ಕನ್ನಡದಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿರುವ ನಟಿ ತಮ್ಮ ಸೌಂದರ್ಯದಿಂದಲೇ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಾಕೆ.
ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ನಟ ಪ್ರಸನ್ನ ಅವರ ಪ್ರೀತಿಯ ಬಲೆಯಲ್ಲಿ ಬಿದ್ದು 2012ರಲ್ಲಿ ಮದುವೆಯಾದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸುತ್ತಿರುವ ಸ್ನೇಹಾ ಹೊಸ ಸೀರೆ ವ್ಯಾಪಾರ ಶುರು ಮಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಪತಿ-ಪತ್ನಿಯ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
ಸಂಬಂಧದಲ್ಲಿ ಪೊಸೆಸಿವ್ನೆಸ್ ಇರಬೇಕು ಆದರೆ ಅತಿಯಾಗಬಾರದು. ಅತಿಯಾದರೆ ನಾವು ನಂಬಿಕೆ ಕಳೆದುಕೊಳ್ಳುತ್ತೇವೆ. ಯಾಕೆ ಹೊರಗೆ ಹೋಗುತ್ತಿದ್ದೀರಿ? ಇಷ್ಟೊತ್ತು ಏನ್ ಮಾಡ್ತಿದ್ರಿ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಲೇಬಾರದು. ಒಬ್ಬರೊನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡರೆ ಈ ಪ್ರಶ್ನೆಗಳು ಉದ್ಭವಿಸುವುದಿಲ್ಲ. ದಂಪತಿ ಮಧ್ಯೆ ಪರಸ್ಪರ ನಂಬಿಕೆ ಇಟ್ಟುಕೊಳ್ಳಬೇಕು ಎಂದು ಸ್ನೇಹಾ ಹೇಳಿದ್ದಾರೆ.
ಇನ್ನೊಬ್ಬರು ನಮ್ಮನ್ನು ಕೇಳುವ ಮೊದಲು ಎಲ್ಲಿಗೆ ಹೋಗುತ್ತಿದ್ದೇವೆ ಮತ್ತು ಯಾವ ಸಮಯಕ್ಕೆ ಮನೆಗೆ ವಾಪಸ್ ಬರುತ್ತೇವೆ ಎಂಬುದನ್ನು ಮುಂಚಿತವಾಗಿಯೇ ಹೇಳಬೇಕು. ನೀವು ಹೊರಗೆ ಹೋದ ನಂತರ ನಿಮಗೆ ಸಮಯವಿದ್ದರೆ, ನಿಮ್ಮ ಸಂಗಾತಿಗೆ ಒಮ್ಮೆ ಕರೆ ಮಾಡಿ ವಿಚಾರಿಸಬೇಕು. ಅವನು ಅಥವಾ ಅವಳು ತಿಂದಿದ್ದಾನೋ/ತಿಂದಿದ್ದಾಳೋ ಎಂದು ಕೇಳಬೇಕು ಎಂದು ಸುಖ ದಾಂಪತ್ಯದ ಗುಟ್ಟು ಬಿಚ್ಚಿಟ್ಟಿದ್ದಾರೆ.
ಇದರ ನಡುವೆ ಪತಿ ಪ್ರಸನ್ನ ಬಗ್ಗೆ ಮಾತನಾಡಿರುವ ಸ್ನೇಹಾ, ನಾವಿಬ್ಬರು ಲವ್ ಮಾಡಿ ಮದುವೆಯಾದೆವು. ಮದುವೆ ಬಳಿಕವೂ ನಾವಿಬ್ಬರು ಪ್ರತ್ಯೇಕವಾಗಿ ವಾಸುತ್ತಿದ್ದೆವು. ಏಕೆಂದರೆ, ನಮಗೆ ನಮ್ಮದೇಯಾದ ಪ್ರೈವೆಸಿ ಬೇಕಿತ್ತು. ಆರಂಭದಲ್ಲಿ ನಾನು ನನ್ನ ತವರು ಮನೆಯಲ್ಲಿ ಉಳಿದುಕೊಂಡಿದ್ದೆ. ಮದುವೆಯಾದ 15 ರಿಂದ 20 ದಿನಗಳವರೆಗೂ ಹೀಗೆ ಇದ್ದೆವು. ಆನಂತರ ನಾವಿಬ್ಬರು ಮತ್ತೆ ಒಂದಾದೆವು. ಸುಂದರ ಸಂಸಾರ ನಡೆಸಿದೆವು. ಎಲ್ಲರ ಕುಟುಂಬದಲ್ಲೂ ಇದ್ದಂತೆ ನಮ್ಮಲ್ಲೂ ಸಣ್ಣ ಪುಟ್ಟ ಜಗಳಗಳು ನಡೆದಿವೆ. ಮಕ್ಕಳಾದ ಬಳಿಕ ನಮ್ಮ ಗಮನವೆಲ್ಲ ಅವರ ಕಡೆ ಹೋಯಿತು. ಮಕ್ಕಳನ್ನು ಚೆನ್ನಾಗಿ ಬೆಳಸಬೇಕು ಎಂಬುದೇ ನಮಗಿರುವ ಏಕೈಕ ಚಿಂತೆಯಾಗಿದೆ. ನಮ್ಮ ವೈವಾಹಿಕ ಜೀವನ ಒಮ್ಮೊಮ್ಮೆ ಬೋರ್ ಆಗುತ್ತದೆ. ಅಂತಹ ಸಮಯದಲ್ಲಿ ನಾವು ಡೇಟ್ ನೈಟ್ಗಳಿಗೆ ಹೋಗುತ್ತೇವೆ. ಆ ಸಮಯದಲ್ಲಿ ನಾವು ಅನೇಕ ನೆನಪುಗಳ ಬಗ್ಗೆ ಮಾತನಾಡುತ್ತೇವೆ. ಆಗ ನಮ್ಮ ನಡುವೆ ಮತ್ತೆ ಹೊಸ ಉತ್ಸಾಹ ಬರುತ್ತದೆ ಎಂದು ಸ್ನೇಹ ಹೇಳಿದರು.
ಪ್ರಸನ್ನ ಮತ್ತು ನಾನು ಆಗಾಗ ಬೆಕ್ಕು ಮತ್ತು ಇಲಿಯಂತೆ ಜಗಳವಾಡುತ್ತೇವೆ. ಆದರೆ ಜಗಳದ ನಂತರವೂ ನಾವು ಒಬ್ಬರೊಬ್ಬರನ್ನು ಅರ್ಥಮಾಡಿಕೊಳ್ಳುತ್ತೇವೆ ಎಂದು ಸ್ನೇಹಾ ಹೇಳಿದರು.