ಮುಂಬೈ ಇಂಡಿಯನ್ಸ್ ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನೊಂದಿಗೆ ತನ್ನ ಅಭಿಯಾನ ಆರಂಭಿಸಿತ್ತು. ಬಳಿಕ ಎರಡು ಪಂದ್ಯಗಳಲ್ಲಿ ಗೆದ್ದರೂ ಮೊದಲ ಆರು ಪಂದ್ಯಗಳಲ್ಲಿ ನಾಲ್ಕು ಸೋಲಿನೊಂದಿಗೆ ಪ್ಲೇ ಆಫ್ಸ್ ಹಾದಿಯನ್ನು ಕಠಿಣವಾಗಿಸಿಕೊಂಡಿತು. ಈ ಬಗ್ಗೆ ಮಾತನಾಡಿದ ಮಾಜಿ ಕ್ರಿಕೆಟಿಗ ಹಾಗೂ ಮುಂಬೈ ಇಂಡಿಯನ್ಸ್ನ ಮಾಜಿ ನಾಯಕ ಹರ್ಭಜನ್ ಸಿಂಗ್, ತಂಡದಲ್ಲಿ ಒಗ್ಗಟ್ಟಿಲ್ಲ ಎಂದು ಟೀಕೆ ಮಾಡಿದ್ದಾರೆ.
ಹ್ಯಾಟ್ರಿಕ್ ಸೋಲಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯ ದಾಖಲಿಸಿದ್ದ ಮುಂಬೈ ತಂಡಕ್ಕೆ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲಿನ ಬರೆ ಎಳೆದಿತ್ತು. ತಂಡದ ಪರ ಬ್ಯಾಟಿಂಗ್ನಲ್ಲಿ ರೋಹಿತ್ ಶರ್ಮಾ ಮತ್ತು ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಆದರೆ, ಉಳಿದ ಆಟಗಾರರಿಂದ ಅಂತಹ ಹೇಳಿಕೊಳ್ಳುವ ಪ್ರದರ್ಶನ ಬಂದಿಲ್ಲ.
ನೂತನ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ವೈಫಲ್ಯತೆ ಎದುರಿಸಿದ್ದಾರೆ. “ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ಒಂದು ತಂಡವಾಗಿ ಆಡುತ್ತಿಲ್ಲ. ಕೇವಲ ಕೆಲ ಆಟಗಾರರು ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ. ತಂಡ ಎರಡು ಪಂದ್ಯ ಗೆದ್ದಿರುವುದು ಇಬ್ಬರು ಆಟಗಾರರ ವೈಯಕ್ತಿಕ ಪ್ರದರ್ಶನದಿಂದ. ಪಂದ್ಯಗಳನ್ನು ಗೆಲ್ಲಲು ಒಗ್ಗಟ್ಟಿನಿಂದ ಆಡಬೇಕು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.
ಒಗ್ಗಟ್ಟಿನಿಂದ ಆಡಿದರಷ್ಟೇ ಟೂರ್ನಿಯಲ್ಲಿ ಮುನ್ನಡೆಯಲು ಸಾಧ್ಯ,” ಎಂದು ಟರ್ಬನೇಟರ್ ಖ್ಯಾತಿಯ ಮಾಜಿ ಆಫ್ ಸ್ಪಿನ್ನರ್ ಟೀಕೆ ಮಾಡಿದ್ದಾರೆ. ಈ ಹಿಂದಿನ ಪಂದ್ಯಗಳ ಫಲಿತಾಂಶ ಮತ್ತು ಬೆಳವಣಿಗೆಗಳನ್ನು ಮರೆತುಬಿಡಬೇಕು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಒಂದು ಅವಕಾಶ ಎಂದು ಪರಿಗಣಿಸಿ ಸಂಘಟಿತ ಪ್ರದರ್ಶನ ನೀಡುವ ಕಡೆಗೆ ಗಮನ ನೀಡಬೇಕು,” ಎಂದಿದ್ದಾರೆ.