ನವದೆಹಲಿ:– 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನ ಮಾಡದಿದ್ದರೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಲಿದೆ.
ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದೆ. ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಲಿದ್ದು, ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ.
ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಆರಂಭವಾಗಲಿದ್ದು, ಸಂಜೆ 5 ಗಂಟೆವರೆಗೆ ಜನರು ಹಕ್ಕು ಚಲಾಯಿಸಬಹುದಾಗಿದೆ. ಇದರ ಬೆನ್ನಲ್ಲೇ, ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದವರ ಬ್ಯಾಂಕ್ ಖಾತೆಯಿಂದ 350 ರೂ. ಕಡಿತವಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಾದರೆ ಈ ಸುದ್ದಿ ಎಷ್ಟು ನಿಜ? ಇಲ್ಲಿದೆ ಸತ್ಯಾಂಶ.
ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದವರ ಬ್ಯಾಂಕ್ ಖಾತೆಯಿಂದ 350 ರೂ. ಕಡಿತಗೊಳಿಸಲಾಗುತ್ತದೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪತ್ರಿಕೆಯೊಂದರಲ್ಲಿ ಈ ಕುರಿತು ವರದಿ ಪ್ರಕಟಿಸಲಾಗಿದೆ ಎಂಬುದಾಗಿ ನಕಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ದೇಶದಲ್ಲಿ ಮತದಾನ ಮಾಡುವುದು ಕಡ್ಡಾಯವಾಗಿದೆ. ಯಾರು ಮತದಾನ ಮಾಡುವುದಿಲ್ಲವೋ, ಅವರ ಬ್ಯಾಂಕ್ ಖಾತೆಯಿಂದ 350 ರೂಪಾಯಿಯನ್ನು ಕಡಿತಗೊಳಿಸಲಾಗುತ್ತದೆ ಎಂಬುದಾಗಿ ಮಾಹಿತಿ ಹರಿದಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವರದಿಯ ಪೋಸ್ಟ್ ವೈರಲ್ ಆಗುತ್ತಲೇ, ಚುನಾವಣಾ ಆಯೋಗ, ಹಲವು ಪೊಲೀಸ್ ಇಲಾಖೆಗಳು ಫ್ಯಾಕ್ಟ್ ಚೆಕ್ ಮಾಡಿವೆ. ಫ್ಯಾಕ್ಟ್ ಚೆಕ್ ಮಾಹಿತಿ ಪ್ರಕಾರ, ಮತದಾನ ಮಾಡದವರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುವುದಿಲ್ಲ. ಇದರ ಕುರಿತು ಯಾವುದೇ ಮಾಧ್ಯಮಗಳೂ ವರದಿ ಮಾಡಿಲ್ಲ. ಇವೆಲ್ಲ ನಕಲಿ ಸುದ್ದಿಯಾಗಿವೆ. ಯಾರೂ ಕೂಡ ಇಂತಹ ಪೋಸ್ಟ್ಗಳನ್ನು ಶೇರ್ ಮಾಡಬಾರದು ಎಂಬುದಾಗಿ ಪೊಲೀಸರು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.