ಬೆಂಗಳೂರಿನಲ್ಲಿ ಜೈ ಶ್ರೀರಾಮ್ ಘೋಷಣೆಗೆ ಅಡ್ಡಿಪಡಿಸಿ ಬೆದರಿಕೆ ಹಾಕಿದ ಮುಸ್ಲಿಂ ಮೂಲಭೂತವಾದಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಕಠಿಣ ಕ್ರಮ ವಹಿಸಬೇಕು. ಇಲ್ಲವಾದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರವಾಗಿ ಪ್ರತಿಭಟಿಸಲಾಗುವುದು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು, ಪಾಕಿಸ್ತಾನ ಬೆಂಬಲಿತರು, ಟಿಪ್ಪು ಸಿದ್ಧಾಂತವಾದಿಗಳು ಹೆಚ್ಚಿದ್ದಾರೆ. ಭಯೋತ್ಪಾದನೆ ಹಾಗೂ ಬಾಂಬ್ ಸ್ಫೋಟದಂತಹ ಘಟನೆಗಳು ನಡೆಯುತ್ತಿರುವುದು ಬಹಳ ಆತಂಕಕಾರಿ. ಇಡೀ ದೇಶದಲ್ಲಿ ಶ್ರೀರಾಮ ನವಮಿ ಆಚರಣೆ ಮಾಡಲಾಗಿದೆ.
ನನ್ನ ಮನೆಯಲ್ಲೂ ರಾಮನವಮಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಜೈ ಶ್ರೀರಾಮ್ ಹೇಳಬಾರದು ಅಲ್ಲಾಹು ಅಕ್ಬರ್ ಎನ್ನಬೇಕು ಎಂದು ಮುಸ್ಲಿಂ ಮೂಲಭೂತವಾದಿಗಳು ಹಿಂದೂಗಳಿಗೆ ಬೆಂಗಳೂರಿನಲ್ಲಿ ಕೊಲೆ ಬೆದರಿಕೆ ಹಾಕಿದ್ದಾರೆ. ನಾವೀಗ ಪಾಕಿಸ್ತಾನದಲ್ಲಿ ಇದ್ದೀವಾ ಎಂಬ ಅನುಮಾನ ಶುರುವಾಗಿದೆ ಎಂದರು.