ದುಬೈನಲ್ಲಿ ಸುರಿಯುತ್ತಿರುವ ಭೀಕರ ಮಳೆ ಮುಂದುವರೆದಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೂ ಅನಿವಾರ್ಯವಲ್ಲದ ಪ್ರಯಾಣವನ್ನು ಮುಂದೂಡುವಂತೆ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಅಥವಾ ಅದರ ಮೂಲಕ ಹಾದು ಹೋಗುವ ವಿಮಾನಗಳಲ್ಲಿ ಪ್ರಯಾಣಿಸುವ ಭಾರತೀಯರಿಗೆ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ.
ದುಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಾರದ ದಾಖಲೆಯ ಮಳೆಯಿಂದ ಚೇತರಿಸಿಕೊಳ್ಳಲು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಯತ್ನಿಸುತ್ತಿದೆ.
ಯುಎಇ ಅಧಿಕಾರಿಗಳು ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಾಮಾನ್ಯ ಸ್ಥಿತಿಗೆ ತರಲು ಹಗಲಿರುಳು ಶ್ರಮಿಸುತ್ತಿದ್ದಾರೆ. ನಿಮಾನಗಳ ನಿರ್ಗಮನ ದಿನಾಂಕ ಮತ್ತು ಸಮಯದ ಕುರಿತು ಆಯಾ ವಿಮಾನಯಾನ ಸಂಸ್ಥೆಗಳಿಂದ ಅಂತಿಮ ದೃಢೀಕರಣದ ನಂತರವೇ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಈ ವಾರದ ಆರಂಭದಲ್ಲಿ ಸುರಿದ ಭಾರೀ ಮಳೆಯಿಂದಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಒಳಬರುವ ವಿಮಾನಗಳ ಸಂಖ್ಯೆಯನ್ನು ತಾತ್ಕಾಲಿಕವಾಗಿ ಸೀಮಿತಗೊಳಿಸಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
“ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಅಥವಾ ಆ ಮಾರ್ಗದಲ್ಲಿ ಹಾದು ಹೋಗುವ ವಿಮಾನಗಳಲ್ಲಿ ಪ್ರಯಾಣಿಸುವ ಭಾರತೀಯ ಪ್ರಯಾಣಿಕರು ವಿಮಾನಗಳ ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳುವವರೆಗೆ ಅನಿವಾರ್ಯವಲ್ಲದ ಪ್ರಯಾಣವನ್ನು ಮರುಹೊಂದಿಸಲು ಸೂಚಿಸಲಾಗಿದೆ” ಎಂದು ರಾಯಭಾರ ಕಚೇರಿ ಪ್ರಕಟಣೆ ತಿಳಿಸಿದೆ.