ಅದ್ಭುತ ಫ್ಲೈಯಿಂಗ್ ಕ್ಯಾಚ್ ಹಿಡಿದು ಜಡೇಜಾ ಅವರು ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಎಲ್ ರಾಹುಲ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ರವೀಂದ್ರ ಜಡೇಜಾ 40 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 57 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ ಧೋನಿ 9 ಎಸೆತಗಳಲ್ಲಿ ಧೋನಿ 28 ರನ್ ಸಿಡಿಸಿದರು. ಈ ಮೂಲಕ ಸಿಎಸ್ಕೆ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತು.
177 ರನ್ಗಳ ಗುರಿ ಪಡೆದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿಕಾಕ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ 134 ರನ್ ಪೇರಿಸಿ ಡಿಕಾಕ್ (54) ಔಟಾದರು. ಮತ್ತೊಂದೆಡೆ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು.
53 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 82 ರನ್ ಬಾರಿಸಿದ್ದ ಕೆಎಲ್ ರಾಹುಲ್ ಅವರನ್ನು ಕೊನೆಗೂ ಪೆವಿಲಿಯನ್ಗೆ ಕಳುಹಿಸುವಲ್ಲಿ ಜಡೇಜಾ ಯಶಸ್ವಿಯಾದರು. ಮಥೀಶ ಪತಿರಾಣ ಎಸೆದ 18ನೇ ಓವರ್ನ ಮೊದಲ ಎಸೆತದಲ್ಲಿ ರಾಹುಲ್ ಪಾಯಿಂಟ್ ಕ್ಷೇತ್ರದ ಮೂಲಕ ಫೋರ್ ಬಾರಿಸಲು ಯತ್ನಿಸಿದರು. ಗಾಳಿಯಲ್ಲಿ ಚಿಮ್ಮಿದ ಚೆಂಡನ್ನು ಕ್ಷಣಾರ್ಧದಲ್ಲೇ ರವೀಂದ್ರ ಜಡೇಜಾ ಒಂದೇ ಕೈಯಲ್ಲಿ ಹಿಡಿಯುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದರು