ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಗೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಬಳಿಕ ಸಲ್ಲು ಮನೆಗೆ ಮತ್ತಷ್ಟು ಭದ್ರತೆ ಒದಗಿಸಲಾಗಿದೆ. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಇದೀಗ ಮತ್ತೊಂದು ಪ್ರಕರಣ ನಡೆದಿದೆ. ಗ್ಯಾಂಗ್ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಸಲ್ಲು ಮನೆಗೆ ಕ್ಯಾಬ್ ಬುಕ್ ಮಾಡಿದ್ದ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಉತ್ತರ ಪ್ರದೇಶದ ಗಾಜಿಯಾಬಾದ್ನ 20 ವಯಸ್ಸಿನ ರೋಹಿತ್ ತ್ಯಾಗಿ. ಆರೋಪಿಯು, ನಟ ಸಲ್ಮಾನ್ ಖಾನ್ ಮನೆ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಿಂದ ಬಾಂದ್ರಾ ಪೊಲೀಸ್ ಠಾಣೆಗೆ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಕ್ಯಾಬ್ ಬುಕ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕ್ಯಾಬ್ ಡ್ರೈವರ್ ಸಲ್ಮಾನ್ ಖಾನ್ ವಾಸವಾಗಿರುವ ಗ್ಯಾಲಾಕ್ಸಿ ಅಪಾರ್ಟ್ಮೆಂಟ್ ಬಳಿ ಬಂದಿದ್ದಾನೆ. ‘ಲಾರೆನ್ಸ್ ಬಿಷ್ನೋಯ್ ಕ್ಯಾಬ್ ಬುಕ್ ಮಾಡಿದ್ದಾರೆ’ ಎಂದು ಸೆಕ್ಯುರಿಟಿ ಬಳಿ ಹೇಳಿದ್ದಾರೆ. ಇದನ್ನು ಕೇಳಿ ಸೆಕ್ಯುರಿಟಿ ಶಾಕ್ ಆಗಿದ್ದಾರೆ. ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಪೊಲೀಸರು ತನಿಖೆ ನಡೆಸಿದಾಗ ಇದು ಫೇಕ್ ಬುಕಿಂಗ್ ಅನ್ನೋದು ಗೊತ್ತಾಗಿದೆ.
ರೋಹಿತ್ ತ್ಯಾಗಿ ಎಂಬಾತ ಈ ಕ್ಯಾಬ್ ಬುಕ್ ಮಾಡಿದ್ದಾನೆ ಅನ್ನೋದು ಪೊಲೀಸರಿಗೆ ಗೊತ್ತಾಗಿದೆ. ಆ ಬಳಿಕ ಆತನ ಬಂಧಿಸಲಾಗಿದೆ. ಪ್ರ್ಯಾಂಕ್ ಮಾಡಲು ಈ ರೀತಿ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾರೆ. ಸದ್ಯ ಗಜಿಯಾಬಾದ್ನಿಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ.