ಕಂಪನಿಯ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿರುವುದರಿಂದ ಭಾರತದ ಭೇಟಿ ಮುಂದೂಡಿರುವುದಾಗಿ ಟೆಸ್ಲಾ ಕಂಪನಿಯ ಸಿಇಒ ಎಲೋನ್ ಮಸ್ಕ್ ತಿಳಿಸಿದ್ದಾರೆ.
ಇದೇ ಏಪ್ರಿಲ್ 21 ಮತ್ತು 22ರಂದು ಎಲೋನ್ ಮಸ್ಕ್ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿಯಾಗಿತ್ತು. ಅಲ್ಲದೇ ಭಾರತದಲ್ಲಿ ಟೆಸ್ಲಾ ಕಂಪನಿಯ ಘಟಕದ ಸ್ಥಾಪನೆ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದ್ರೆ ಎಲಾನ್ ಮಸ್ಕ್ ಭಾರತದ ಭೇಟಿ ಮುಂದೂಡಿದ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ದುರಾದೃಷ್ಟವಶಾತ್, ಕಂಪನಿಯ ಕೆಲಸದಲ್ಲಿ ನಿರತರಾಗಿರುವುದರಿಂದ ಭಾರತಕ್ಕೆ ಭೇಟಿ ನೀಡಲಾಗುತ್ತಿಲ್ಲ. ಆದರೆ ಇದೇ ವರ್ಷ ಭಾರತಕ್ಕೆ ಭೇಟಿ ನೀಡುತ್ತೇನೆ ಎಂದು ಎಲೋನ್ ಮಸ್ಕ್ ಬರೆದುಕೊಂಡಿದ್ದಾರೆ.
ಸದ್ಯ ಭಾರತದಲ್ಲಿ ಎಲೋನ್ ಮಸ್ಕ್ ಟೆಸ್ಲಾ ಕಾರು ಉತ್ಪಾದನಾ ಘಟಕ ಸ್ಥಾಪಿಸಲು 2-3 ಶತಕೋಟಿ ಡಾಲರ್ ಹೂಡಿಕೆ ಮಾಡುತ್ತಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದೆ. 2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಎಲೋನ್ ಮಸ್ಕ್ ಬಳಿ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು. ಆದರೆ ಕೇಂದ್ರ ಸರ್ಕಾರ ಮತ್ತು ಎಲೋನ್ ಮಸ್ಕ್ ಕಂಪನಿ ಜೊತೆ ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದ್ದ ಈ ಪ್ರಕ್ರಿಯೆ ಮುಂದೂಡಲಾಗಿತ್ತು. ಇದೀಗ ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲೇ ಮಾತುಕತೆ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗಿದೆ. ಹೀಗಾಗಿ ಎಲೋನ್ ಮಸ್ಕ್ ಭಾರತ ಭೇಟಿಯ ವೇಳೆ ಟೆಸ್ಲಾ ಕಂಪೆನಿಯ ಬಗ್ಗೆಯೂ ಮಾತನಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಎಲ್ಲದಕ್ಕೂ ಸದ್ಯದ ಮಟ್ಟಿಗೆ ಬ್ರೇಕ್ ಬಿದ್ದಿದೆ.