ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಸಮಾಜ ಸೇವಾ ಕಾರ್ಯಗಳಿಗೆ ಮುಂದಾಗಿದೆ. ಪ್ರತಿ ಬಾರಿ ತನ್ನ ಆವೃತ್ತಿಯಲ್ಲಿ ಹಸಿರು ಜೆರ್ಸಿ ಧರಿಸಿ ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಆರ್ಸಿಬಿ ಕ್ರಿಕೆಟ್ ಫ್ರಾಂಚೈಸಿ, ಈ ಬಾರಿ ಬೆಂಗಳೂರಿನಲ್ಲಿ ಮೂರು ಕೆರೆಗಳನ್ನು (Benglauru Lakes) ಮರು ಅಭಿವೃದ್ಧಿಗೊಳಿಸಲು ಮುಂದಾಗಿದೆ. ತಂಡದ ಹಸಿರು ಅಭಿಯಾನ ಯೋಜನೆಯಡಿ ಈ ಕೆಲಸಕ್ಕೆ ಫ್ರಾಂಚೈಸಿ ಮುಂದಾಗಿದೆ.
ಬೆಂಗಳೂರಿನ ಇಟ್ಟಗಾಲಪುರ ಕೆರೆ ಮತ್ತು ಸದೇನಹಳ್ಳಿ ಕೆರೆ ಮರು ಅಭಿವೃದ್ಧಿ ಕಾರ್ಯವು ಮುಕ್ತಾಯ ಹಂತ ತಲುಪಿದೆ. ಕಣ್ಣೂರು ಕೆರೆಯಲ್ಲಿ ನಾಗರಿಕರಿಗೆ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಆರ್ಸಿಬಿಯು ಕಳೆದ ಅಕ್ಟೋಬರ್ನಿಂದಲೇ ಇಎಸ್ಜಿ ಬದ್ಧತೆಯಡಿಯಲ್ಲಿ ಕೆರೆ ಸುಧಾರಣೆ ಕಾರ್ಯ ಯೋಜನೆಯನ್ನು ಆರಂಭಿಸಿದೆ. ಕಾವೇರಿ ನೀರಿನಿಂದ ವಂಚಿತವಾಗಿರುವ ಹಾಗೂ ಅಂತರ್ಜಲ ಮತ್ತು ಮಳೆ ನೀರಿನ ಮೂಲದ ಮೇಲೆಯೇ ಅವಲಂಬಿತವಾಗಿರುವ ಪ್ರದೇಶಗಳ ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಗುರಿಯೂ ಇದಾಗಿದೆ.
ಇಟ್ಟಗಾಲಪುರ ಮತ್ತು ಸದೇನಹಳ್ಳಿ ಕೆರೆಗಳಿಂದ ಇದುವರೆಗೆ 1.20 ಲಕ್ಷ ಟನ್ ಹೂಳು (Silt) ಮತ್ತು ಮರಳನ್ನು ಹೊರತೆಗೆಯಲಾಗಿದೆ. ಅದೇ ಮಣ್ಣನ್ನು ಕೆರೆಗಳಿಗೆ ಒಡ್ಡು ಕಟ್ಟಲು ಮತ್ತು ಕಾಲುಹಾದಿ ನಿರ್ಮಿಸಲು ಬಳಸಲಾಗಿದೆ. ಅಲ್ಲದೇ ಸುತ್ತಮುತ್ತಲಿಗೆ 52 ರೈತರು ತಮ್ಮ ಹೊಲ. ಗದ್ದೆಗಳಿಗಾಗಿ ಈ ಮಣ್ಣು ತೆಗೆದುಕೊಂಡೂ ಹೋಗಿದ್ದಾರೆ ಎಂದು ಆರ್ಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಥಳೀಯ ಸಮುದಾಯಗಳ ಕಲ್ಯಾಣ ನಮ್ಮ ಗುರಿಯಾಗಿದೆ. ಬೆಂಗಳೂರಿನ ಪ್ರಮುಖ ಕೆರೆಗಳನ್ನು ಮರಳಿ ಅಭಿವೃದ್ಧಿಪಡಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗಲಿದೆ. ಅಲ್ಲದೇ ಅಕ್ಕಪಕ್ಕದ ಗ್ರಾಮಗಳಿಗೆ ಕೃಷಿ ಮತ್ತಿತರ ಕಾರ್ಯಗಳಿಗೂ ನೀರಿನ ಸೌಲಭ್ಯ ಒದಗಿಸಲಿದೆ ಎಂದು ಆರ್ಸಿಬಿ ಮುಖ್ಯಸ್ಥ ರಾಜೇಶ್ ಮೆನನ್ ಹೇಳಿದ್ದಾರೆ.