ಹುಬ್ಬಳ್ಳಿಯ ಖಾಸಗಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಪ್ರಕರಣ ಸಂಬಂಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಈ ಬೆನ್ನಲ್ಲೇ ಕನ್ನಡ ಚಿತ್ರರಂಗ ಕೂಡ ವಿದ್ಯಾರ್ಥಿನಿ ಸಾವಿಗೆ ಮರುಗಿದ್ದಾರೆ. ಈಗಾಗ್ಲೆ ಸಾಕಷ್ಟು ನಟಿ, ನಟಿಯರು ಘಟನೆ ಕುರಿತು ಪ್ರತಿಕ್ರಿಯಿಸಿದ್ದು ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಯಾಕ್ಟ್ ಮಾಡಿದ್ದಾರೆ.
ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ 23 ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಸಾಮಾಜಿಕ ಜಾಲಾ ತಾಣದಲ್ಲಿ ಬರೆದುಕೊಂಡಿದ್ದಾರೆ.
ಇನ್ನೂ ನಟ ಶಿವರಾಜ್ ಕುಮಾರ್ ಎಕ್ಸ್ ಖಾತೆಯಲ್ಲಿ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದು, ಈ ರೀತಿಯ ಅಮಾನುಷ ಘಟನೆ ಮತ್ತೆಂದೂ ಮರುಕಳಿಸದಿರಲಿ. ಮಗಳನ್ನು ಕಳೆದುಕೊಂಡ ಆ ತಂದೆ-ತಾಯಿಯ ಆಕ್ರಂದನ ನೋಡಲಾಗದು. ನಮ್ಮ ಸರ್ಕಾರ, ನ್ಯಾಯಾಂಗ ವ್ಯವಸ್ಥೆ, ಹಾಗೂ ಪೊಲೀಸ್ ಆದಷ್ಟು ಬೇಗ ನೇಹಾ ಹಿರೇಮಠ್ ಸಾವಿಗೆ ನ್ಯಾಯ ದೊರಕುವಂತೆ ಮಾಡಲಿ ಎನ್ನುವುದು ನನ್ನ ಕಳಕಳಿಯ ವಿನಂತಿ ಎಂದಿದ್ದಾರೆ.
ನೇಹಾ ಹಿರೇಮಠ್ ಅವರ ಘಟನೆ ಅಮಾನವೀಯವಾಗಿದೆ. ಇಂತಹ ಘಟನೆ ಮರುಕಳಿಸದಂತೆ ಕಾನೂನು ಕ್ರಮಗಳನ್ನು ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕೆಂದು ವಿನಂತಿಸುತ್ತಾ, ನೇಹಾ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಟ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.