ತಮಿಳುನಾಡಿನ ಲೋಕಸಭೆ ಚುನಾವಣಾ ಕಣ ರಂಗೇರಿದೆ. ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ತಮ್ಮ ಹಕ್ಕನ್ನು ಸಾಧಿಸಿದ್ದಾರೆ. ಈ ಮಧ್ಯೆ ವೋಟ್ ಮಾಡಲು ಬಂದ ತಮಿಳು ವೆಟ್ರಿ ಕಳಗಂ ನಾಯಕ ಮತ್ತು ನಟ ದಳಪತಿ ವಿಜಯ್ ವಿರುದ್ಧ ದೂರು ದಾಖಲಾಗಿದೆ.
ಸುಮಾರು 200 ಜನರೊಂದಿಗೆ ವಿಜಯ್ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಚುನಾವಣಾ ನಿಯಮಗಳನ್ನು ಉಲ್ಲಂಘಿಸಿ ಜನರನ್ನು ಮತಗಟ್ಟೆಗೆ ಕರೆತರಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಸಿನಿಮಾದ ಶೂಟಿಂಗ್ ಕಾರಣದಿಂದ ರಷ್ಯಾದಲ್ಲಿ ಬೀಡು ಬಿಟ್ಟಿದ್ದ ವಿಜಯ್ ಮತದಾನಕ್ಕಾಗಿ ತಮಿಳುನಾಡಿಗೆ ಆಗಿಸಿದ್ದಾರೆ. ವೋಟ್ ಮಾಡಲು ವಿಜಯ್ ಬರುತ್ತಾರೆ ಎಂದು ಅಭಿಮಾನಿಗಳು ಬೆಳಗ್ಗೆಯಿಂದಲೇ ವಿಜಯಾ ನಿವಾಸದ ಎದುರು ಜಮಾಯಿಸಿದ್ದರು. ವಿಜಯ್ ಮಧ್ಯಾಹ್ನ ಮತ ಚಲಾಯಿಸಲು ಬಂದಿದ್ದರು. ತಮ್ಮ ಮನೆಯಿಂದ ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಮತಗಟ್ಟೆಗೆ ಆಗಮಿಸಿದರು.
ಜನ ಕಿಕ್ಕಿರಿದು ತುಂಬಿದ್ದ ಕಾರಣ ವಿಜಯ್ ತಡವಾಗಿ ಮತಗಟ್ಟೆ ತಲುಪಿದ್ರು. ತಳ್ಳಾಟ ನೂಕಾಟದಿಂದ ವಿಜಯಾ ಅವರ ಕೈಗೆ ಪೆಟ್ಟಾಗಿದೆ. ವಿಜಯ್ ಶುಕ್ರವಾರ ಮಧ್ಯಾಹ್ನ ನೀಲಂಕಾರೈನಲ್ಲಿರುವ ವೇಲ್ಸ್ ಇಂಟರ್ ನ್ಯಾಶನಲ್ ಸ್ಕೂಲ್ ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬಿಗಿ ಭದ್ರತೆಯಲ್ಲಿ ಮತದಾನ ಮಾಡಲು ಆಗಮಿಸಿದ ವಿಜಯ್ ಜೊತೆ ಅಪಾರ ಜನಸ್ತೋಮವೇ ನೆರೆದಿತ್ತು.