ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಎಸೆದ ನೋ ಬಾಲ್ ಕಾರಣ ಎಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿನ ಭಾರತ ತಂಡದ ಗೆಲುವಿಗೆ ನೆರವಾಗಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ, ಮೂರನೇ ಟೆಸ್ಟ್ ಪಂದ್ಯದಲ್ಲಿ ಅದೇ ಪ್ರದರ್ಶನ ಮುಂದುವರಿಸುವಲ್ಲಿ ವಿಫಲರಾಗಿದ್ದರು. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಎದುರಾಳಿ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರುವಲ್ಲಿ ಅವರು ವಿಫಲರಾದರು.
ಭಾರತ ತಂಡದ 109ಕ್ಕೆ ಆಲ್ಔಟ್ ಆದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ ಬಹುಬೇಗ ಟ್ರಾವಿಸ್ ಹೆಡ್ ಅವರ ವಿಕೆಟ್ ಅನ್ನು ಕಳೆದುಕೊಂಡಿತ್ತು. ಆದರೆ, ಮೂರನೇ ಕ್ರಮಾಂಕದಲ್ಲಿ ಬಂದಿದ್ದ ಮಾರ್ನಸ್ ಲಾಬುಶೇನ್ ಖಾತೆ ತೆರೆಯುವುದಕ್ಕೂ ಮುನ್ನ ಜಡೇಜಾ ಬೌಲಿಂಗ್ನಲ್ಲಿ ಔಟ್ ಆಗಿದ್ದರು. ಆದರೆ, ಆ ಎಸೆತ ನೋ ಬಾಲ್ ಆಗಿದ್ದರಿಂದ ಅವರು ಜೀವದಾನ ಪಡೆದಿದ್ದರು.
ಇದಾದ ಬಳಿಕ ಮಾರ್ನಸ್ 31 ರನ್ ಗಳಿಸುವ ಜೊತೆಗೆ ಉಸ್ಮಾನ್ ಖವಾಜ ಅವರ ಜೊತೆ ಸೇರಿ ಎರಡನೇ ವಿಕೆಟ್ಗೆ 96 ರನ್ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಆಸ್ಟ್ರೇಲಿಯಾ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯದ ಹೊರತಾಗಿಯೂ ಕಾಂಗರೂ ಪಡೆ 197 ರನ್ ಗಳಿಸಿ, 88 ರನ್ ಮುನ್ನಡೆ ಸಾಧಿಸಿತ್ತು.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸುನೀಲ್ ಗವಾಸ್ಕರ್, ಭಾರತದ ಸೋಲಿಗೆ ಕಾರಣ ತಿಳಿಸಿದ್ದು, ರವೀಂದ್ರ ಜಡೇಜಾ ಎಸೆದ ನೋ ಬಾಲ್ ತಂಡದ ಪಂದ್ಯದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೋ ಬಾಲ್ಗೆ ಬೆಲೆ ತೆತ್ತ ಭಾರತ
“ಪಂದ್ಯವನ್ನು ನೀವೊಮ್ಮೆ ಅವಲೋಕಿಸಿದರೆ, ಟೀಮ್ ಇಂಡಿಯಾ ಸೋಲಿನಲ್ಲಿ ಮಹತ್ತರ ಪಾತ್ರ ವಹಿಸಿದ್ದು ಯಾವ ಅಂಶ ಎಂಬುದು ನಿಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, ಪ್ರಥಮ ಇನಿಂಗ್ಸ್ನಲ್ಲಿ ಕೇವಲ 109 ರನ್ಗಳಿಗೆ ಆಲ್ಔಟ್ ಆಗಿತ್ತು. ನಂತರ ಪ್ರಥಮ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಆರಂಭದಲ್ಲೇ ಟ್ರಾವಿಸ್ ಹೆಡ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಜಡೇಜಾ ಬೌಲಿಂಗ್ನಲ್ಲಿ ಮಾರ್ನಸ್ ಲಾಬುಶೇನ್ ಔಟಾಗಿದ್ದರು. ಆದರೆ ಆ ಎಸೆತ ನೋ ಬಾಲ್ ಆಗಿತ್ತು. ಇದರ ಲಾಭ ಪಡೆದ ಲಾಬುಶೇನ್ ಹಾಗೂ ಉಸ್ಮಾನ್ ಖವಾಜಾ 2ನೇ ವಿಕೆಟ್ಗೆ 96 ರನ್ಗಳ ಜೊತೆಯಾಟವಾಡಿತು. ರವೀಂದ್ರ ಜಡೇಜಾ ಎಸೆದ ನೋ ಬಾಲ್ ಪರಿಣಾಮದ ಫಲವಾಗಿ ತಂಡ ಸೋಲುವಂತಾಯಿತು,” ಎಂದು ಭಾರತ ತಂಡದ ಮಾಜಿ ನಾಯಕ ಟೀಕಿಸಿದ್ದಾರೆ.
9 ನೋ ಬಾಲ್
ಆಸ್ಟ್ರೇಲಿಯಾ ಹಾಗೂ ಭಾರತ ತಂಡದ ನಡುವೆ ನಡೆಯುತ್ತಿರುವ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡಿ 21 ವಿಕೆಟ್ ಕೆಡವಿ ಗಮನ ಸೆಳೆದಿದ್ದಾರೆ. ಆದರೆ, ಈ ಸರಣಿಯಲ್ಲಿ ಇದುವರೆಗೂ 9 ಬಾರಿ ಗೆರೆ ದಾಟಿ ಬೌಲಿಂಗ್ ಮಾಡಿ ನೋ ಬಾಲ್ಗಳನ್ನು ಎಸೆದಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ಗೆ ಒಂದು ಬಾರಿ ಹಾಗೂ ಮಾರ್ನಸ್ ಲಾಬುಶೇನ್ಗೆ 2 ಬಾರಿ ಜೀವದಾನ ನೀಡಿದ್ದಾರೆ.
ಸೋಲಿನ ದಂಡ ಕಟ್ಟಿದ ಭಾರತ
ಇಂದೋರ್ನ ಹೋಳ್ಕರ್ ಅಂಗಣದಲ್ಲೂ ನೋ ಬಾಲ್ ಮೂಲಕ ಮಾರ್ನಸ್ ಲಾಬುಶೇನ್ ಅವರಿಗೆ ಜೀವದಾನ ನೀಡಿದ ರವೀಂದ್ರ ಜಡೇಜಾ, ಪ್ರಥಮ ಇನಿಂಗ್ಸ್ನಲ್ಲಿ 4 ವಿಕೆಟ್ ಪಡೆದು ಮಿಂಚಿದರೂ, ಗೆರೆ ದಾಟಿ ಬೌಲಿಂಗ್ ಮಾಡಿದ ತಪ್ಪಿಗೆ ಟೀಮ್ ಇಂಡಿಯಾಗೆ ಭಾರಿ ಹಿನ್ನಡೆಯಾಯಿತು.
ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರೋಹಿತ್ ಶರ್ಮಾ ಪಡೆ, ಪ್ರಥಮ ಇನಿಂಗ್ಸ್ನಲ್ಲಿ 109 ರನ್ಗಳಿಗೆ ಎಲ್ಲ ವಿಕೆಟ್ ಒಪ್ಪಿಸಿತು. ನಂತರ ದ್ವಿತೀಯ ಇನಿಂಗ್ಸ್ನಲ್ಲಿ ನೇಥನ್ ಲಯನ್ (64 ಕ್ಕೆ 8) ಅವರ ಸ್ಪಿನ್ ದಾಳಿಗೆ ನಲುಗಿ 163 ರನ್ ಗಳಿಸಲಷ್ಟೇ ಶಕ್ತವಾಗಿ 76 ರನ್ಗಳ ಸುಲಭ ಸವಾಲು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಕಾಂಗರೂ ಪಡೆ, ಮಾರ್ನಸ್ ಲಾಬುಶೇನ್ (28*) ಹಾಗೂ ಟ್ರಾವಿಸ್ ಹೆಡ್ (49*) ರವರ ಸ್ಫೋಟಕ ಆಟದಿಂದಾಗಿ 9 ವಿಕೆಟ್ ಗೆಲುವು ಪಡೆಯಿತು.