ಗಾಂಧಿನಗರ: ಚುನಾವಣಾ ಬಾಂಡ್ ಎಂಬುದು ವಿಶ್ವದ ಅತಿದೊಡ್ಡ ಸುಲಿಗೆ ಹಗರಣ ಎಂದು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದಾರೆ. ”ಚುನಾವಣಾ ಬಾಂಡ್ ಬೃಹತ್ ಸುಲಿಗೆ ಹಗರಣ ಎಂದು ಟೀಕಿಸಿರುವ ರಾಹುಲ್ ಅವರು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪಡೆದಿರುವ ದೇಣಿಗೆಯನ್ನೂ ‘ವಸೂಲಿ’ ಎನ್ನುವರೇ? ಈ ಬಗ್ಗೆ ಮೊದಲು ಅವರು ಸ್ಪಷ್ಟನೆ ನೀಡಲಿ,” ಎಂದು ಅಮಿತ್ ಶಾ ಸವಾಲು ಹಾಕಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ, ”ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೆಲವು ಚುನಾವಣಾ ಪ್ರಚಾರ ಭಾಷಣಗಳಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ವಿಶ್ವದ ಅತಿದೊಡ್ಡ ಸುಲಿಗೆ ಯೋಜನೆ ಎಂದು ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭ್ರಷ್ಟಾಚಾರದ ಚಾಂಪಿಯನ್” ಎಂದು ಆರೋಪಿಸಿದ್ದಾರೆ. ಹಾಗಾದರೆ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪಡೆದ ದೇಣಿಗೆಯನ್ನೂ ಕಾಂಗ್ರೆಸ್ ಯುವರಾಜ ‘ಸುಲಿಗೆ’ ಎನ್ನಬಹುದೇ? ನಾವೂ ವಸೂಲಿ ಮಾಡಿದ್ದೇವೆ ಎಂದು ಅವರು ಜನರಿಗೆ ಹೇಳುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.