ಹುಬ್ಬಳಿಯ ಯುವತಿ ನೇಹಾ ಹಿರೇಮಠ್ ಕೊಲೆಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಈಗಾಗ್ಲೆ ಚಂದನವನದ ಸ್ಟಾರ್ಸ್ ಗಳು ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ನಟ ಪ್ರಥಮ್ ನೇಹಾ ತಂದೆ-ತಾಯಿಯನ್ನು ಭೇಟಿ ಮಾಡಿದ್ದಾರೆ.
ನೇಹಾ ಪೋಷಕರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಥಮ್, ‘ಕಲಾವಿದರು ಎಲೆಕ್ಷನ್ ಪ್ರಚಾರಕ್ಕೆ ಬರುತ್ತಾರೆ. ಇಂಥ ಘಟನೆ ಆದಾಗ ಯಾರೂ ಬರಲ್ಲ. ಅಂಥ ಕಲಾವಿದರನ್ನು ತಲೆ ಮೇಲೆ ಇಟ್ಟುಕೊಂಡು ಮೆರೆಸಬೇಡಿ. ನೇಹಾ ಹಿರೇಮಠ್ ನಿಧನದಿಂದ ಚಿತ್ರರಂಗದ ಎಲ್ಲರಿಗೂ ನೋವಾಗಿದೆ. ಪ್ರಹ್ಲಾದ್ ಜೋಶಿ ಅವರೇ ನೀವು 10 ವರ್ಷದಿಂದ ಅಧಿಕಾರದಲ್ಲಿ ಇದ್ದೀರಿ. ಅಂತರ್ ಧರ್ಮೀಯ ವಿವಾಹದ ಬಗ್ಗೆ ಕಠಿಣ ನಿಯಮ ತೆಗೆದುಕೊಂಡು ಬನ್ನಿ’ ಎಂದಿದ್ದಾರೆ.
‘ಹಿಂದೂ ಧರ್ಮದ ಹುಡುಗಿಯರನ್ನು ಬೇರೆ ಧರ್ಮದವರು ಮದುವೆ ಆಗಲೇಬಾರದು. ಯಾಕೆ ಆಗಬೇಕು? ಹಿಂದೂ ಹುಡುಗಿಯರ ಜೊತೆ ನೀವು ಲವ್ ಯಾಕೆ ಮಾಡುತ್ತೀರಿ? ಅದರಿಂದಲೇ ತಾನೆ ಇಷ್ಟೆಲ್ಲ ಕ್ರೌರ್ಯ ಆಗುತ್ತಿರುವುದು. ನಿಮ್ಮ ಪಾಡಿಗೆ, ನಿಮ್ಮ ಸಮುದಾಯದವರನ್ನೇ ಮದುವೆ ಆಗಿ. ಹಿಂದೂ ಹುಡುಗಿಯರ ಜೊತೆ ನಿಮಗೆ ಏನು ಕೆಲಸ? ನಿಮ್ಮ ಸಮುದಾಯದಲ್ಲೇ ಬೇಕಾದರೆ ಒಂದಲ್ಲ ಎರಡಲ್ಲ 5 ಮದುವೆ ಮಾಡಿಕೊಳ್ಳಿ. ನಿಮ್ಮನ್ನು ಯಾರು ಕೇಳ್ತಾರೆ? ಇನ್ನೊಮ್ಮೆ ಹಿಂದೂಗಳ ತಂಟೆಗೆ ಬರಬೇಡಿ’ ಎಂದು ನಟ ಪ್ರಥಮ್ ಹೇಳಿದ್ದಾರೆ.
‘ನನಗೆ ತುಂಬ ನೋವಾಯಿತು. ಅದಕ್ಕಾಗಿಯೇ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇನೆ. ಕಡೆಗಣಿಸಿದರೆ ಪ್ರಾಣ ತೆಗೆದುಬಿಡೋದಾ? ನನ್ನ ಮಗ ಅಂಥವನಲ್ಲ ಎಂದು ಅವರ ತಾಯಿ ಹೇಳ್ತಾರೆ. ವೀರಪ್ಪ ನಾಯಕ ಸಿನಿಮಾದ ಕಥೆ ರೀತಿ ಹೇಳಿಕೆ ನೀಡ್ತಾರೆ. 20 ವರ್ಷದ ಹಿಂದೆ ಇವರು ಸಿಕ್ಕಿದ್ದಿದ್ರೆ ನಿರ್ದೇಶಕರು ಶ್ರುತಿ ಬದಲಿಗೆ ಇವರನ್ನೇ ಆಯ್ಕೆ ಮಾಡುತ್ತಿದ್ದರು’ ಎಂದರು.
‘ಈಗ ಯಾರೋ ಬಂದು ಸಮಾಧಾನ ಹೇಳಿದರು. ಸಮಾಧಾನ ಹೇಳುವುದೇ ಹೌದಾದರೆ ಅವರ ಸಮುದಾಯದ ಯಾರೂ ಕೂಡ ಈ ಕೇಸ್ ತೆಗೆದುಕೊಳ್ಳಬಾರದು ಅಂತ ಹೇಳಿ. ಮುಖಂಡರು ಹೇಳಿಕೆಗಳನ್ನು ಕೊಡುವಾಗ ನೋವು ಮಾಡಬೇಡಿ. ಇದರ ಜೊತೆ ಪಾಲಕರಿಗೆ ಒಂದು ಕಿವಿಮಾತು. ನಿಮ್ಮ ಮಕ್ಕಳು ಯಾರ ಜೊತೆ ಇರುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ಗಮನಿಸಿ. ಅವನು 9 ಸಲ ಚುಚ್ಚಿದ್ದಾನೆ ಎಂದರೆ ಅವನ ಮನಸ್ಥಿತಿ ಎಷ್ಟು ವಿಕೃತ ಆಗಿದೆ ನೋಡಿ. ಈ ವಿಚಾರದಲ್ಲಿ ರಾಜಕೀಯ ಬೇಡ. ಸಿನಿಮಾದ ಪ್ರಚಾರಕ್ಕೆ ಈ ಊರಿಗೆ ಬರಬೇಕು ಎಂದುಕೊಂಡಿದ್ದೆ. ಆದರೆ ಈಗ ಸಾವಿನ ಮನೆಗೆ ಬರುವಂತೆ ಆಗಿದೆ’ ಎಂದು ಪ್ರಥಮ್ ನೋವು ತೋಡಿಕೊಂಡಿದ್ದಾರೆ.