ನವದೆಹಲಿ: ಪರಿಸರ ರಕ್ಷಣೆ ಹಾಗೂ ಅರಣ್ಯಗಳು ಮತ್ತು ವನ್ಯಜೀವಿಗಳನ್ನು ಕಾಪಾಡುವುದರ ಕುರಿತಾದ ಸಂವಿಧಾನದ 48ಎ ವಿಧಿಯು, ನಾಗರಿಕರ ಜೀವಿಸುವ ಹಕ್ಕಿನ ಜತೆ ನೇರ ಸಂಪರ್ಕ ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹವಾಮಾನ ವೈಪರೀತ್ಯದ ಕೆಟ್ಟ ಪರಿಣಾಮಗಳಿಂದ ದೇಶ ಹಾಗೂ ಜಗತ್ತನ್ನು ಉಳಿಸಲು ಅರಣ್ಯ ಸಂರಕ್ಷಣೆ ಮಾಡುವಂತೆ ಅದು ಸರ್ಕಾರಗಳಿಗೆ ಸೂಚಿಸಿದೆ,
ಆಂಧ್ರ ಪ್ರದೇಶದ ವಾರಂಗಲ್ ಜಿಲ್ಲೆಯಲ್ಲಿನ ಕೊಂಪಲ್ಲಿ ಗ್ರಾಮದಲ್ಲಿ 1980ರ ದಶಕದಿಂದ ತನ್ನ ವೈಯಕ್ತಿಕ ಬಳಕೆಗಾಗಿ ಅರಣ್ಯ ಭೂಮಿಯನ್ನು ಪರಿವರ್ತಿಸಲು ಪ್ರಯತ್ನಿಸುತ್ತಿರುವ ಮೊಹಮದ್ ಅಬ್ದುಲ್ ಖಾಸಿಂ ಪ್ರಕರಣದಲ್ಲಿ ಮೂಕ ಪ್ರೇಕ್ಷಕರಂತೆ ಇದ್ದ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾ ಎಂಎಂ ಸುಂದರೇಶ್ ಮತ್ತು ನ್ಯಾ ಎಸ್ವಿಎನ್ ಭಟ್ಟಿ ಅವರನ್ನು ಒಳಗೊಂಡ ನ್ಯಾಯಪೀಠ, ವಿರೋಧಾಭಾಸದ ನಿಲುವು ಪ್ರದರ್ಶಿಸಿದ ತೆಲಂಗಾಣ ಸರ್ಕಾರಕ್ಕೆ 5 ಲಕ್ಷ ರೂ ದಂಡ ವಿಧಿಸಿದೆ.
ಅರಣ್ಯ ಭೂಮಿ ಮೇಲೆ ಖಾಸಿಂಗೆ ಯಾವುದೇ ಹಕ್ಕು ಇಲ್ಲ ಎಂದು ಈ ಆಂಧ್ರ ಪ್ರದೇಶ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ರಾಜ್ಯ ವಿಭಜನೆ ಬಳಿಕ ಖಾಸಿಂ ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿ ವಿಚಾರಣೆಗೆ ಸ್ವೀಕರಿಸಿದ್ದನ್ನು ಸುಪ್ರೀಂ ಕೋರ್ಟ್ ಟೀಕಿಸಿದೆ. 1854ರಲ್ಲಿ ಆಗಿನ ಅಮೆರಿಕ ಅಧ್ಯಕ್ಷರಿಗೆ ಬುಡಕಟ್ಟು ಸಮುದಾಯದ ಮುಖ್ಯಸ್ಥರೊಬ್ಬರು ಬರೆದ ಪತ್ರವನ್ನು ನ್ಯಾಯಪೀಠ ಉಲ್ಲೇಖಿಸಿತು.
“ಭೂಮಿಯು ಮನುಷ್ಯನಿಗೆ ಸೇರಿದ್ದಲ್ಲ; ಆದರೆ ಮನುಷ್ಯ ಭೂಮಿಗೆ ಸೇರಿದವನು” ಎಂದು ಪೀಠ ಹೇಳಿತು. ರಾಜ್ಯ ನೀತಿಯ ನಿರ್ದೇಶಿತ ತತ್ವಗಳನ್ನು ಸಂವಿಧಾನದ 48ಎ ಸ್ಪಷ್ಟವಾಗಿ ಸೂಚಿಸುತ್ತದೆ. ಹಾಗೆಯೇ 51 ಎ (ಜಿ) ವಿಧಿಯು ಅರಣ್ಯಗಳು, ಸರೋವರ, ನದಿಗಳು ಮತ್ತು ವನ್ಯಜೀವಿ ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವ ಮತ್ತು ಸುಧಾರಿಸುವ ಹಾಗೂ ಇತರೆ ಸಹಜೀವಿಗಳ ಕಡೆ ಅನುಕಂಪ ತೋರುವ ನಾಗರಿಕರ ಕರ್ತವ್ಯಗಳನ್ನು ಪ್ರತಿಪಾದಿಸುತ್ತದೆ ಎಂದು ಕೋರ್ಟ್ ತಿಳಿಸಿದೆ.