ಹುಬ್ಬಳ್ಳಿಯಲ್ಲಿ ಹಂತಕನಿಂದ ಕೊಲೆಯಾದ ನೇಹಾ ಬಗ್ಗೆ ಸೆಲೆಬ್ರಿಟಿಗಳು ಧ್ವನಿಯೆತ್ತಿದ್ದಾರೆ. ಘಟನೆಯ ಬಗ್ಗೆ ಸ್ಯಾಂಡಲ್ ವುಡ್ ನಟ, ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ನಟ ಪ್ರಥಮ್ ನೇಹಾ ಮನೆಗೆ ಭೇಟಿ ನೀಡಿ ಪೋಷಕರೊಂದಿಗೆ ಮಾತನಾಡಿದ್ದಾರೆ. ಜೊತೆಗೆ ನೇಹಾ ವಿಷಯದಲ್ಲಿ ನಟ ಪ್ರಕಾಶ್ ರಾಜ್ ಹಾಗೂ ಚೇತನ್ ಯಾಕೆ ಮಾತನಾಡುತ್ತಿಲ್ಲ ಎಂದು ಪರೋಕ್ಷವಾಗಿ ಪ್ರಶ್ನೆ ಮಾಡಿದ್ದಾರೆ.
ಸದಾ ಪ್ರಗತಿಪರ ವಿಚಾರಗಳ ಕುರಿತು ಮಾತನಾಡುವ ಚೇತನ್ ಅಹಿಂಸಾ, ಪ್ರಕಾಶ್ ರಾಜ್ ಇಂದು ಯಾಕೆ ಮಾತನಾಡುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ. ಎಲ್ಲದಕ್ಕೂ ಧ್ವನಿಯೆತ್ತುವ, ಮಾತೆತ್ತಿದರೆ ನರೇಂದ್ರ ಮೋದಿಯವರನ್ನು ಪ್ರಶ್ನಿಸುವವರು ಈಗ ರಾಜ್ಯದ ಮಗಳು ಮೃತಪಟ್ಟಿದ್ದಾರೆ. ಆಕೆಯ ಬಗ್ಗೆ ಯಾಕೆ ನೀವು ಧ್ವನಿ ಎತ್ತುತ್ತಿಲ್ಲ? ಬರೀ ಅಹಿಂಸಾ ಎಂದು ಹೆಸರಿಟ್ಟುಕೊಂಡರೆ ಸಾಲದು. ಇಂತಹ ಘಟನೆ ಬಗ್ಗೆ ಧ್ವನಿಯೆತ್ತಬೇಕು. ಕೇವಲ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುವುದಲ್ಲ ಎಂದು ಪ್ರಕಾಶ್ ರಾಜ್ ಮತ್ತು ಚೇತನ್ ಗೆ ಪರೋಕ್ಷವಾಗಿ ಕುಟುಕಿದ್ದಾರೆ.
ಈ ನಡುವೆ ಫಯಾಜ್ ಮತ್ತು ನೇಹಾ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ಖಾತೆ ತೆರೆದು ಜಸ್ಟಿಸ್ ಫಾರ್ ಲವ್ ಎಂದು ಬರೆದ ಕಿಡಿಗೇಡಿಗಳಿಗೂ ಪ್ರಥಮ್ ಜಾಡಿಸಿದ್ದಾರೆ. ಜಸ್ಟಿಸ್ ಫಾರ್ ಲವ್ ಎಂದರೆ ಅರ್ಥವೇನು? ಇಲ್ಲಿ ನ್ಯಾಯ ಸಿಗಬೇಕಾಗಿರುವುದು ನೇಹಾಗೆ ಎಂದು ಕಿಡಿ ಕಾರಿದ್ದಾರೆ.