ಬೆಂಗಳೂರು:- ನಗರದ ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಗೊಳಿಸಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆದೇಶಿಸಿದ್ದಾರೆ.
ವಿಶ್ವವಿಖ್ಯಾತ ಕರಗ ಉತ್ಸವವು ರಾಜಧಾನಿಯಲ್ಲಿ ಭಾರೀ ವಿಜೃಂಭಣೆಯಿಂದ ಜರುಗುತ್ತಿದೆ. ಎಪ್ರಿಲ್ 15 ರಿಂದ ಮಹೋತ್ಸವವು ಆರಂಭಗೊಂಡಿದ್ದು, ಎಪ್ರಿಲ್ 23 ರಂದು ಸಂಪನ್ನಗೊಳ್ಳಲಿದೆ. ಉತ್ಸವದ ಕೊನೆಯ ದಿನ ಭಾರೀ ಸಂಖ್ಯೆಯ ಜನರು ಸೇರಲಿದ್ದು, ಈ ಹಿನ್ನೆಲೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.
ಸಾರ್ವಜನಿಕರ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಅಹಿತಕರ ಚಟುವಟಿಕೆ ನಡೆಯದಂತೆ ನಿಗಾ ವಹಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮದ್ಯ ಮಾರಾಟ ನಿಷೇಧ ಆದೇಶವನ್ನು ಜಾರಿಗೊಳಿಸಲಾಗಿದೆ. ಹಲಸೂರು ಗೇಟ್, ಎಸ್ಆರ್ ನಗರ, ವಿಲ್ಸನ್ ಗಾರ್ಡನ್, ಎಸ್ ಜೆ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಕರಗ ಉತ್ಸವ ದಿನ ಮದ್ಯ ಮಾರಾಟ ಹಾಗೂ ಬಾರ್ & ರೆಸ್ಟೋರೆಂಟ್, ಪಬ್, ವೈನ್ ಶಾಪ್ಗಳನ್ನು ಮುಚ್ಚುವಂತೆ ಕಮೀಷನರ್ ದಯಾನಂದ್ ಆದೇಶಿಸಿದ್ದಾರೆ.
ಎಪ್ರಿಲ್ 23ರ ಬೆಳಗ್ಗೆ 6 ರಿಂದ ಎಪ್ರಿಲ್ 24ರ ಬೆಳಗ್ಗೆ 10 ಗಂಟೆಯವರೆಗೆ ನಿಷೇಧಿಸಲಾಗಿದೆ. ಹಾಗಾಗಿ ನಾಲ್ಕು ಠಾಣಾ ವ್ಯಾಪ್ತಿಯ ಬಾರ್ & ರೆಸ್ಟೋರೆಂಟ್, ಮದ್ಯದ ಅಂಗಡಿಗಳು, ವೈನ್ ಶಾಪ್, ಪಬ್ ಗಳನ್ನು ಈ ಸಮಯದಲ್ಲಿ ಮುಚ್ಚುವಂತೆ ಆದೇಶಿಸಲಾಗಿದೆ.