ಬೆಂಗಳೂರು ಗ್ರಾಮಾಂತರ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಅವರ ತಂದೆ, ಕಾಂಗ್ರೆಸ್ ಕಾರ್ಪೊರೇಟರ್ಗೆ ಕೂಡ ಸರ್ಕಾರ ಸಹಾಯ ಮಾಡುತ್ತಿಲ್ಲ. ಸಿಎಂ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್. ಅಶೋಕ್, ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಆಡಳಿತ ನಡೆಸುತ್ತಿದೆ.
ಕಾನೂನು ಸುವ್ಯವಸ್ಥೆ ಪೂರ್ತಿ ಹದಗೆಟ್ಟು ಜನರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು ಎಂಬ ಮನಸ್ಥಿತಿಯನ್ನು ದುಷ್ಟ ಕಾಂಗ್ರೆಸ್ ಉಂಟು ಮಾಡಿದೆ. ಮುಸ್ಲಿಂ ಮತಾಂಧವಾದಿಗಳಿಗೆ ಈ ಸರ್ಕಾರದಲ್ಲಿ ಬಹಳ ಗೌರವವಿದೆ. ನೀವು ನಮ್ಮ ಮತ ಬ್ಯಾಂಕ್ ಆಗಿದ್ದು, ನಿಮ್ಮ ಪೂರ್ತಿ ರಕ್ಷಣೆ ಮಾಡುತ್ತೇವೆ ಎಂದು ಸರ್ಕಾರವೇ ಹೇಳಿದೆ. ಜೈ ಶ್ರೀರಾಮ್ ಎಂದರೆ, ಮೋದಿ ಕುರಿತು ಹಾಡು ಹಾಕಿದರೆ ಹೊಡೆಯುತ್ತಾರೆ. ಪಾಕ್ ಜಿಂದಾಬಾದ್ ಎಂದವರಿಗೆ ಬಿರಿಯಾನಿ ಜೊತೆಗೆ ಪಾಸ್ ಕೂಡ ಕೊಡುತ್ತಾರೆ ಎಂದರು.
ಡಿ. ಕೆ. ಸುರೇಶ್ ಅವರ ರ್ಯಾಲಿಯಲ್ಲಿ ಕೆಲವರು ಪಾಕಿಸ್ತಾನಕ್ಕೆ ಜೈ ಎಂದಿದ್ದಾರೆ. ಆದರೆ ಡಿ. ಕೆ. ಸುರೇಶ್ ಏನೂ ಮಾತಾಡದೆ ಸುಮ್ಮನೆ ನಿಂತಿದ್ದರು. ಈಗಾಗಲೇ ಅವರು ದೇಶ ಒಡೆಯುವ ಮಾತನಾಡಿದ್ದಾರೆ. ಭಾರತ ಮಾತೆಯನ್ನು ಪ್ರೀತಿಸುವ ಬೆಂಗಳೂರು ಗ್ರಾಮಾಂತರದ ಜನರು ಇವರಿಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದರು. ರಾಮೇಶ್ವರಂ ಕೆಫೆಯಲ್ಲಿ ನಡೆದ ಘಟನೆ ಭಯೋತ್ಪಾದನಾ ಚಟುವಟಿಕೆಯಾಗಿದ್ದು, ಇದನ್ನು ಮಾಡುವವರೆಲ್ಲ ಡಿ. ಕೆ. ಶಿವಕುಮಾರ್ ಅವರ ಸಹೋದರರೇ ಆಗಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟ ಮಾಡಿದವನನ್ನು ಬ್ರದರ್ ಎಂದ ಡಿ. ಕೆ. ಶಿವಕುಮಾರ್ ಒಕ್ಕಲಿಗ ಹೇಗಾಗುತ್ತಾರೆ? ಒಕ್ಕಲಿಗ ಮುಖಂಡ ಎಂದು ಹೇಳಿಕೊಂಡು ಮತ ಯಾಚಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.